ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ 12ನೇ ಶತಮಾನದ ಮಹಾನ್ ಶರಣ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾಪೌರರಾದ ಪ್ರೀತಿ ಕಾಮಕರ್ ಅವರು, ಬಸವಾದಿ ಶರಣರ ತತ್ವ ಮತ್ತು ಸಿದ್ಧಾಂತಗಳನ್ನು ಬರೀ ಜಯಂತಿಯ ದಿನದಂದು ನೆನಪಿಸಿಕೊಂಡರೆ ಸಾಲದು, ಅವುಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶರಣರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಕರೆ ನೀಡಿದರು.


ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ 12ನೇ ಶತಮಾನದ ಮಹಾನ್ ಶರಣ ಹಾಗೂ ವಚನಕಾರ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತ್ಯುತ್ಸವ ವೇದಿಕೆ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಸಂಘಟಕರು ಅಪ್ಪಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಅವರ ಸಾಮಾಜಿಕ ಕ್ರಾಂತಿ, ಸಮಾನತೆಯ ಸಂದೇಶ ಮತ್ತು ವಚನ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಿದರು.

ಮಹಾಪೌರ ಪ್ರೀತಿ ಕಾಮಕರ ಅವರು, ಬಸವಣ್ಣನವರನ್ನು ಕೇವಲ ಜಯಂತಿಯ ದಿನದಂದು ನೆನಪಿಸಿಕೊಂಡರೆ ಸಾಲದು. ಅವರ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಾವು ನೀಡುವ ನಿಜವಾದ ಗೌರವ ಹಾಗೂ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ಬಸವಣ್ಣನವರ ವಚನಗಳನ್ನು ಸ್ಮರಿಸುತ್ತಾ “ಕಾಯಕವೇ ಕೈಲಾಸ” ಎಂಬ ತತ್ವದಂತೆ ಸಾಗಬೇಕು. ಎಲ್ಲರೂ ಸಮಾನತೆಯಿಂದ ಬದುಕುತ್ತಾ, ಅಪ್ಪನವರ ಕನಸಿನ ಸುಂದರ ಹಾಗೂ ನವ ಕರ್ನಾಟಕವನ್ನು ಕಟ್ಟಲು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಎಂದು ಉಪಮಹಾಪೌರರಾದ ಹನುಮಂತ ಕೊಂಗಾಲಿ ಅವರು, ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸಿದ ಶರಣ ಹಡಪದ ಅಪ್ಪಣ್ಣನವರು ಕಾಯಕ ಹಾಗೂ ಜ್ಞಾನ ದಾಸೋಹದ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವೃತ್ತಿ ಅಥವಾ ಕಾಯಕದ ಆಧಾರದ ಮೇಲೆ ಜಾತಿ-ಭೇದಗಳನ್ನು ಮಾಡಬಾರದು. ಕೀಳು-ಮೇಲು ಎಂಬ ಭಾವನೆಯನ್ನು ತೊರೆದು, ಬಸವಣ್ಣನವರ ತತ್ವದಂತೆ ಪ್ರತಿಯೊಬ್ಬರೂ ಸಮಾನತೆ ಮತ್ತು ಸಹೋದರತ್ವದಿಂದ ಬದುಕಿದಾಗ ಮಾತ್ರ ಶರಣರ ಆದರ್ಶಗಳನ್ನು ನಿಜವಾಗಿ ಪಾಲಿಸಿದಂತಾಗುತ್ತದೆ ಎಂದು ತಿಳಿಸಿದರು.

ಉಪನ್ಯಾಸಕ ಸಂತೋಷ ಹಡಪದ ಅವರು ಮಾತನಾಡಿ, ೧೨ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಹಡಪದ ಅಪ್ಪಣ್ಣನವರ ಕಾರ್ಯಕ್ಷಮತೆ ಹಾಗೂ ಜಾಣ್ಮೆಯನ್ನು ಮೆಚ್ಚಿ ಅವರನ್ನು ತಮ್ಮ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಯೋಜಿಸಿಕೊಂಡಿದ್ದರು. ಸರ್ಕಾರವು ನಿಗಮ ಮಂಡಳಿ ಸ್ಥಾಪನೆ ಹಾಗೂ ಜಯಂತಿ ಆಚರಣೆಯಂತಹ ಕಾರ್ಯಗಳನ್ನು ಮಾಡಿದ್ದು, ಸಮಾಜದ ಬಂಧುಗಳು ಕೂಡ ನಾಯಕರೊಂದಿಗೆ ಕೈಜೋಡಿಸಿ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. “ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನನ್ನ ಕೊಡುಗೆ ಏನು” ಎಂದು ಚಿಂತಿಸಿ ಮುನ್ನಡೆದಾಗ ಮಾತ್ರ ಶ್ರೇಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಮಾಜದ ಜನತೆಯೊಂದಿಗೆ ಕಪಿಯೊಂದು ಕೂಡ ಉಪಸ್ಥಿತವಿದ್ದು, ಕುರ್ಚಿಯಲ್ಲಿ ವಿರಾಜಮಾನವಾಗಿ ಎಲ್ಲರ ಗಮನ ಸೆಳೆಯಿತು. ಇಂದು ಶನಿವಾರವಾಗಿದ್ದು, ಹಣುಮಂತನ ಆರ್ಶೀವಾದವೇ ಕಾರ್ಯಕ್ರಮಕ್ಕೆ ಲಭಿಸಿದೆ ಎಂದು ಕೆಲವರು ಮಾತನಾಡಿದ್ದು, ಕೂಡ ಕೇಳಿ ಬಂತು.
ಕಾರ್ಯಕ್ರಮಕ್ಕೂ ಮುನ್ನ ನಗರ ಅಶೋಕ ವೃತ್ತ, ಆರ್.ಟಿ.ಓ ಸಂಗೊಳ್ಳಿ ರಾಯಣ್ಣ ವೃತ್ತ, ಎಸ್ಪಿ ಆಫೀಸ್ ಮಾರ್ಗವಾಗಿ ನಗರದ ಕುಮಾರ ಗಂಧರ್ವ ಕಲಾ ಮಂದಿರದ ವರೆಗೆ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಗೆ ವಿವಿಧ ಜಾನಪದ ಕಲಾ ತಂಡಗಳು ಮೆರಗು ತಂದವು. ಈ ವೇಳೆ ಸಮಾಜ ಬಾಂಧವರು, ಗಣ್ಯರು, ಅಧಿಕಾರಿಗಳು ಭಾಗಿಯಾಗಿದ್ಧರು.
