ಕಾವೇರಿ ನೀರು ಬಿಡುಗಡೆ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಬೇಕಾದ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ತಿಳಿಸಿದ್ದಾರೆ. ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಕಾವೇರಿ ಬಂದ್ ನಿರ್ಧಾರದಿಂದ ಹಿಂದೆ ಸರಿಯುವಂತೆ ಹೋರಾಟಗಾರರಲ್ಲಿ ಅವರು ಮನವಿ ಮಾಡಿದ್ದಾರೆ.

ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಬಿನಿ ಜಲಾಶಯ ಭರ್ತಿಯಾಗಿರುವ ಶುಭ ಘಳಿಗೆಯಲ್ಲೇ ಸಾಂಸ್ಕೃತಿಕ ನಗರಿಗೆ ಬಂದಿರುವುದಾಗಿ ತಿಳಿಸಿದರು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೂ ವರವಾಗಿದ್ದು, ಎರಡೂ ರಾಜ್ಯಗಳ ಹಿತರಕ್ಷಣೆಗೆ ನ್ಯಾಯಾಲಯ ಸೂಕ್ತ ಆದೇಶ ನೀಡಿದೆ ಎಂದರು. ಪ್ರಸ್ತುತ ಜಲಾಶಯಗಳಲ್ಲಿನ ನೀರಿನ ಸ್ಥಿತಿಗತಿಯ ಮಾಹಿತಿ ಸರ್ಕಾರಕ್ಕಿದ್ದು, ನ್ಯಾಯಾಲಯದ ಆದೇಶವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲೂ ರಾಜ್ಯದ ರೈತರ ಹಿತವನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ತಮಿಳುನಾಡು ಸಿಎಂ ವಿಜಯ್ ಕರ್ನಾಟಕ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಪ್ರಸ್ತುತ ವಾತಾವರಣ ತಿಳಿಯಾದ ಬಳಿಕವಷ್ಟೇ ಅವರ ಭೇಟಿಗೆ ದಿನಾಂಕ ನಿಗದಿಪಡಿಸಲಾಗುವುದು, ಅಲ್ಲಿಯವರೆಗೆ ಬರುವುದು ಬೇಡ ಎಂದು ತಿಳಿಸಿರುವುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ಕಾವೇರಿ ವಿಚಾರವಾಗಿ ಬಂದ್ ಕರೆ ನೀಡಿರುವ ಸ್ನೇಹಿತರು ಮತ್ತು ಹೋರಾಟಗಾರರಿಗೆ ಮನವಿ ಮಾಡಿದ ಅವರು, ಹೋರಾಟ ಮಾಡುವ ಹಕ್ಕನ್ನು ಯಾರೂ ಕಸಿದುಕೊಳ್ಳುವುದಿಲ್ಲ, ಆದರೆ ಆ ಹೋರಾಟಕ್ಕೆ ಸೂಕ್ತ ಹಿನ್ನೆಲೆ ಇರಬೇಕು ಮತ್ತು ಅದು ಕೇವಲ ಮಾಧ್ಯಮಗಳಿಗೆ ಸೀಮಿತವಾಗಬಾರದು ಎಂದರು. ಸಾರ್ವಜನಿಕ ಹಾಗೂ ರಾಜ್ಯದ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದ್ದು, ದಯವಿಟ್ಟು ಬಂದ್ ನಿರ್ಧಾರವನ್ನು ಕೈಬಿಡಬೇಕೆಂದು ವಿನಂತಿಸಿದರು. ನಾಳೆ ನಡೆಯಲಿರುವ ಮುಖ್ಯ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ನಿಂದ ರಾಜ್ಯಕ್ಕೆ ದೊಡ್ಡ ಜಯ ಸಿಕ್ಕಿದೆ ಎಂದ ಡಿಸಿಎಂ, ಈ ಹಿಂದೆ ತಮಿಳುನಾಡು ಸರ್ಕಾರವೇ ಮೇಕೆದಾಟು ನಿರ್ಮಾಣಕ್ಕೆ ಅನುಮತಿ ನೀಡಿರುವ ದಾಖಲೆಗಳು ನಮ್ಮ ಬಳಿಯಿವೆ ಎಂದು ತಿಳಿಸಿದರು. ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದ್ದು, ರಾಜಕೀಯಕ್ಕಿಂತ ನ್ಯಾಯಾಲಯದ ತೀರ್ಪಿಗೆ ಗೌರವ ನೀಡುವುದು ಮುಖ್ಯ ಎಂದರು.
