Nippani

ಕೇವಲ ಅಕ್ಷರ ಕಲಿಯುವುದಷ್ಟೇ ಶಿಕ್ಷಣವಲ್ಲ; ಸಂಸ್ಕಾರ, ಸನಾತನ ಮೌಲ್ಯ ಬೆಳೆಸುವುದೇ ಮುಖ್ಯ ಉದ್ದೇಶ: ಶಾಸಕಿ ಶಶಿಕಲಾ ಜೊಲ್ಲೆ

Share

ಕೇವಲ ಅಕ್ಷರ ಕಲಿಯುವುದಷ್ಟೇ ಶಿಕ್ಷಣವಲ್ಲ; ಉತ್ತಮ ಗೌರವ, ಸಂಸ್ಕಾರ ಹಾಗೂ ಭಾರತೀಯ ಸನಾತನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವುದೇ ಜೊಲ್ಲೆ ಎಜುಕೇಶನ್ ಸೊಸೈಟಿಯ ಶಾಲೆಯ ಮೂಲ ಉದ್ದೇಶವಾಗಿದೆ,” ಎಂದು ಮಾಜಿ ಸಚಿವರು ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.

ಸ್ಥಳೀಯ ಶ್ರೀ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಶಾಲೆ (ನಿಪ್ಪಾಣಿ ನಾಂಗನೂರ)ಯಲ್ಲಿ ಆಯೋಜಿಸಲಾಗಿದ್ದ ‘ಗುರು ಪೂರ್ಣಿಮಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬುಧವಾರ ನಡೆದ ಈ ವಿಶೇಷ ಕಾರ್ಯಕ್ರಮವು “ತಂದೆ-ತಾಯಿಯೇ ಪ್ರತ್ಯಕ್ಷ ದೇವರು” ಎಂಬ ಭಾರತೀಯ ನಂಬಿಕೆಗೆ ಸಾಕ್ಷಿಯಾಯಿತು. ವಿದ್ಯಾದೇವಿ ಸರಸ್ವತಿ ಮಾತೆ ಹಾಗೂ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಶಾಸಕಿ ಶಶಿಕಲಾ ಜೊಲ್ಲೆಯವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಶುಭ ಸಂದರ್ಭದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಅವರ ಸುಪುತ್ರ ಜ್ಯೋತಿಪ್ರಸಾದ್ ಹಾಗೂ ಸೊಸೆ ಪ್ರಿಯಾ ಅವರು ಭಕ್ತಿಭಾವದಿಂದ ಪಾದಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡರು.

ತಮ್ಮ ಭಾಷಣವನ್ನು ಮುಂದುವರಿಸಿದ ಶಾಸಕಿಯವರು, “ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಗೌರವ ಮತ್ತು ಸಂಸ್ಕಾರ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯರನ್ನು ಭಕ್ತಿಭಾವದಿಂದ ಪಾದಪೂಜೆ ಮಾಡಿ ಆಶೀರ್ವಾದ ಪಡೆದ ಕ್ಷಣಗಳು ಪ್ರತಿಯೊಬ್ಬರ ಕಣ್ಣಂಚಿನಲ್ಲಿ ಆನಂದಬಾಷ್ಪ ತರಿಸಿದವು. ಇಂದಿನ ದಿನಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಅಗತ್ಯವಾಗಿದ್ದರೂ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎಂದಿಗೂ ಮರೆಯಬಾರದು. ಮಕ್ಕಳಲ್ಲಿ ಸಂಸ್ಕಾರಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಪೋಷಕರ ಮೇಲಿದೆ,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೊಲ್ಲೆ ಕುಟುಂಬದ ಪ್ರಮುಖರಾದ ಜ್ಯೋತಿಪ್ರಸಾದ್ ಜೊಲ್ಲೆ, ಬಸವಪ್ರಸಾದ್ ಜೊಲ್ಲೆ, ಪ್ರಿಯಾ ಜೊಲ್ಲೆ, ಶಾಲೆಯ ಪ್ರಾಂಶುಪಾಲರಾದ ಊರ್ಮಿಳಾ ಚೌಗಲೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

Tags:

error: Content is protected !!