ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರೈತರ ಆರ್ಥಿಕ ಸಬಲೀಕರಣ ಹಾಗೂ ಆಧುನಿಕ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ 2026-27ನೇ ಸಾಲಿನ ಸರ್ಕಾರದ ಸಹಾಯಧನದಡಿ ಸುಮಾರು ₹1.83 ಕೋಟಿ ಮೌಲ್ಯದ ಕೃಷಿ ಯಂತ್ರೋಪಕರಣಗಳು ಹಾಗೂ ಸೂಕ್ಷ್ಮ ನೀರಾವರಿ ಘಟಕಗಳನ್ನು ವಿತರಿಸಲಾಯಿತು.


ಬೆಳಗಾವಿಯ ಗೃಹ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಫಲಾನುಭವಿಗಳಿಗೆ ಸೌಲಭ್ಯಗಳನ್ನು ಹಸ್ತಾಂತರಿಸಿದರು.
ಕೃಷಿ ಇಲಾಖೆಯ ಯಾಂತ್ರೀಕರಣ ಯೋಜನೆಯಡಿ 161 ಫಲಾನುಭವಿಗಳಿಗೆ ₹1.16 ಕೋಟಿ ಮೌಲ್ಯದ ಕೃಷಿ ಯಂತ್ರೋಪಕರಣಗಳು, ಲಘು ನೀರಾವರಿ ಯೋಜನೆಯಡಿ 160 ಫಲಾನುಭವಿಗಳಿಗೆ ₹67.04 ಲಕ್ಷ ಮೌಲ್ಯದ ಹನಿ ಮತ್ತು ತುಂತುರ ನೀರಾವರಿ ಘಟಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ರೈತ ಕೇವಲ ಅನ್ನದಾತನಲ್ಲ, ನಮ್ಮ ಆರ್ಥಿಕತೆಯ ಬೆನ್ನೆಲುಬು. ಮಳೆ, ಚಳಿ, ಬಿಸಿಲೆನ್ನದೆ ಅವಿಶ್ರಾಂತವಾಗಿ ದುಡಿಯುವ ರೈತ ನಮ್ಮ ಗ್ರಾಮೀಣ ಬದುಕಿನ ಆಧಾರ ಹಾಗೂ ರಾಜ್ಯದ ಅಭಿವೃದ್ಧಿಯ ಶಕ್ತಿ ಎಂದು ಹೇಳಿದರು.

“ರೈತ ಸಂತೋಷವಾಗಿದ್ದರೆ ಗ್ರಾಮ ಸಂತೋಷವಾಗಿರುತ್ತದೆ. ಗ್ರಾಮ ಸಂತೋಷವಾಗಿದ್ದರೆ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ರೈತನ ಬದುಕಿನ ಸಮಸ್ಯೆಗಳಿಗೆ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ ಮಾತ್ರವಲ್ಲ, ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ” ಎಂದರು.
ಸಕಾಲದಲ್ಲಿ ಬೀಜ, ಗೊಬ್ಬರ ಪೂರೈಕೆಗೆ ಆದ್ಯತೆ
ಬಿತ್ತನೆ ಸಮಯದಲ್ಲಿ ರೈತರಿಗೆ ಗುಣಮಟ್ಟದ ಬೀಜ ಮತ್ತು ಗೊಬ್ಬರ ಸಕಾಲದಲ್ಲಿ ದೊರೆಯುವುದು ಅತ್ಯಂತ ಮುಖ್ಯ. ಅವು ಸಮಯಕ್ಕೆ ಸಿಗದಿದ್ದರೆ ಇಡೀ ಕೃಷಿ ಹಂಗಾಮಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ರೈತರಿಗೆ ಸಕಾಲದಲ್ಲಿ ಗುಣಮಟ್ಟದ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಬರ ಹಾಗೂ ಅತಿವೃಷ್ಟಿಯಂತಹ ಪ್ರಕೃತಿ ವಿಕೋಪಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಸರ್ಕಾರ ಅವರೊಂದಿಗೆ ನಿಲ್ಲಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ, ಬರ ಪರಿಸ್ಥಿತಿ ಎದುರಿಸಲು ಮುಂಚಿತ ಸಿದ್ಧತೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಆಧುನಿಕ ತಂತ್ರಜ್ಞಾನ ರೈತರ ಹೊಲಕ್ಕೆ ತಲುಪಬೇಕು
ಇಂದಿನ ಕೃಷಿ ಸಾಂಪ್ರದಾಯಿಕ ಪದ್ಧತಿಗಳಿಗೆ ಮಾತ್ರ ಸೀಮಿತವಾಗಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನ ರೈತರ ಹೊಲಕ್ಕೆ ತಲುಪಬೇಕು. ಈ ನಿಟ್ಟಿನಲ್ಲಿ ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆ, ಡ್ರೋನ್ ಹಾಗೂ ಉಪಗ್ರಹಗಳ ಮೂಲಕ ಬೆಳೆ ಸಮೀಕ್ಷೆ ಮತ್ತು ನೈಜ ಸಮಯದ ಮಾಹಿತಿ ಒದಗಿಸುವಂತಹ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ಹೆಬ್ಬಾಳಕರ್ ಹೇಳಿದರು.
“ತಂತ್ರಜ್ಞಾನ ಬೆಂಗಳೂರಿನ ಕಚೇರಿಗಳಲ್ಲಿ ಮಾತ್ರ ಇರಬಾರದು. ಅದು ರೈತನ ಹೊಲಕ್ಕೆ ಬರಬೇಕು, ರೈತನ ಕೈಗೆ ಬರಬೇಕು, ರೈತನ ಬದುಕಿಗೆ ಉಪಯೋಗವಾಗಬೇಕು” ಎಂದು ಹೇಳಿದರು.
ಬಹುತೇಕ ರೈತರು ಸಣ್ಣ ಮತ್ತು ಅತಿಸಣ್ಣ ಭೂಹಿಡುವಳಿದಾರರಾಗಿರುವುದರಿಂದ ಅವರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ‘ರೈತ ಮಿತ್ರ’ ಕಾರ್ಯಕ್ರಮ ರೂಪಿಸಲಾಗಿದೆ. ಅಲ್ಲದೆ, ಮೂರು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ ಶೇ.50ರಷ್ಟು ಸಹಾಯಧನ ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇಂತಹ ಯೋಜನೆಗಳಿಂದ ಸಣ್ಣ ರೈತರಿಗೂ ಆಧುನಿಕ ಕೃಷಿ ಯಂತ್ರೋಪಕರಣಗಳು ಕೈಗೆಟುಕಲಿದ್ದು, ಕೃಷಿ ವೆಚ್ಚ ಕಡಿಮೆಯಾಗಿ ಉತ್ಪಾದಕತೆ ಹಾಗೂ ರೈತರ ಆದಾಯ ಹೆಚ್ಚಲು ಸಹಕಾರಿಯಾಗಲಿದೆ ಎಂದು ಹೇಳಿದರು.
ರೈತನ ಬದುಕಿಗೆ ನೀರೇ ಜೀವ
ರೈತನಿಗೆ ನೀರು ಅತ್ಯಂತ ಮುಖ್ಯ. ನೀರಿದ್ದರೆ ಬೆಳೆ, ಬೆಳೆ ಇದ್ದರೆ ರೈತನ ಬದುಕು. ಹೀಗಾಗಿ ಕೆರೆಗಳಿಗೆ ನೀರು ತುಂಬಿಸುವುದು, ನೀರಾವರಿ ಯೋಜನೆಗಳನ್ನು ಮುಂದುವರಿಸುವುದು ಹಾಗೂ ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೆಬ್ಬಾಳಕರ್ ತಿಳಿಸಿದರು.
ಅಭಿವೃದ್ಧಿ ಯೋಜನೆಗಳಿಗೆ ಭೂಮಿ ನೀಡುವ ರೈತರು ಕೇವಲ ಭೂಮಿ ಕೊಟ್ಟವರಲ್ಲ, ಅವರು ಅಭಿವೃದ್ಧಿಯ ಪಾಲುದಾರರು. ಸಾರ್ವಜನಿಕ ಯೋಜನೆಗಳಿಗೆ ಭೂಮಿ ನೀಡುವ ರೈತರು ಹಾಗೂ ಭೂಮಾಲೀಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ‘Wall of Gratitude’ ನಿರ್ಮಿಸುವಂತಹ ಚಿಂತನೆಯನ್ನೂ ಕೈಗೆತ್ತಿಕೊಳ್ಳಲಾಗಿದೆ ಎಂದರು.
ರೈತರ ಬಳಿಗೆ ಹೋಗಿ ಸಮಸ್ಯೆ ಆಲಿಸಬೇಕು
ರೈತರ ಸಮಸ್ಯೆಗಳನ್ನು ಕೇವಲ ಕಚೇರಿಯ ಕಡತಗಳಲ್ಲಿ ನೋಡದೆ, ರೈತರ ಬಳಿಗೆ ತೆರಳಿ ಅವರ ಹೊಲಗಳಿಗೆ ಭೇಟಿ ನೀಡಿ, ಅವರ ಮಾತುಗಳನ್ನು ಆಲಿಸಬೇಕು. ರೈತರ ಅಹವಾಲು ಮತ್ತು ಅಭಿಪ್ರಾಯಗಳನ್ನು ಆಲಿಸಲು ಸಮಿತಿಗಳನ್ನು ರಚಿಸುವುದು, ಜಿಲ್ಲೆಗಳಿಗೆ ಭೇಟಿ ನೀಡಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಸ್ಥಿತಿಯನ್ನು ಪರಿಶೀಲಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
“ಸರ್ಕಾರ ಎಂದರೆ ಬರ ಬಂದಾಗ ರೈತನ ಜೊತೆ ನಿಲ್ಲುವುದು, ಬೆಳೆ ಹಾಳಾದಾಗ ಬೆಳೆ ವಿಮೆ ತಲುಪಿಸುವುದು, ಸಣ್ಣ ರೈತನಿಗೂ ಆಧುನಿಕ ಯಂತ್ರೋಪಕರಣಗಳ ನೆರವು ನೀಡುವುದು, ರೈತನ ಭೂಮಿಗೆ ಗೌರವ ನೀಡುವುದು ಹಾಗೂ ರೈತನ ಹೊಲಕ್ಕೆ ನೀರು ತಲುಪಿಸುವುದು” ಎಂದು ಅವರು ಹೇಳಿದರು.
ರೈತ ಯಾರ ಮುಂದೆಯೂ ಕೈಚಾಚುವ ಪರಿಸ್ಥಿತಿಯಲ್ಲಿ ಇರಬಾರದು. ತನ್ನ ಮಣ್ಣು, ಶ್ರಮ ಮತ್ತು ಕೃಷಿಯ ಬಗ್ಗೆ ಹೆಮ್ಮೆಪಡುವಂತಾಗಬೇಕು. ರೈತನ ಹೊಲದಲ್ಲಿ ಹಸಿರು, ಮನೆಯಲ್ಲಿ ನೆಮ್ಮದಿ ಹಾಗೂ ಬದುಕಿನಲ್ಲಿ ಭದ್ರತೆ ಇರಬೇಕು. ರೈತ ಬಲಿಷ್ಠನಾದರೆ ಕರ್ನಾಟಕ ಬಲಿಷ್ಠವಾಗುತ್ತದೆ ಎಂದರು.
ರೈತನ ಆದಾಯ, ಕೃಷಿ ಉತ್ಪಾದಕತೆ, ನೀರಾವರಿ, ತಂತ್ರಜ್ಞಾನ ಹಾಗೂ ರೈತನ ಗೌರವಕ್ಕೆ ಆದ್ಯತೆ ನೀಡಿ ಕೆಲಸ ಮಾಡುವ ಸಂಕಲ್ಪ ನಮ್ಮದು. ರೈತನ ಶ್ರಮಕ್ಕೆ ಬೆಲೆ, ಬೆಳೆಗೆ ಮಾರುಕಟ್ಟೆ ಹಾಗೂ ಕುಟುಂಬಕ್ಕೆ ನೆಮ್ಮದಿ ದೊರೆಯಬೇಕು. ರೈತ ಉಳಿದರೆ ನಾಡು ಉಳಿಯುತ್ತದೆ, ರೈತ ಬೆಳೆದರೆ ಕರ್ನಾಟಕ ಬೆಳೆಯುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ಸಲೀಂ ಸಂಗತ್ರಾಸ್, ಸಹಾಯಕ ಕೃಷಿ ನಿರ್ದೇಶಕಿ ಮಂಗಳಾ ಎಸ್. ಬಿರಾದಾರ್, ಕಾಡಾ ಅಧ್ಯಕ್ಷ ಯುವರಾಜ ಕದಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ದೇಸೂರಕರ್, ಮುಖಂಡರಾದ ಮನೋಹರ್ ಬೆಳಗಾಂವ್ಕರ್ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
