ಬೆಳಗಾವಿ ಸಮೀಪದ ಅಲತಗಾ ಕ್ರಾಸ್ ಬಳಿ ಇರುವ ‘ಭಾವೇಶ್ವರಿ ಸ್ವೀಟ್ ಮಾರ್ಟ್’ ಬೇಕರಿಗೆ ಮಂಗಳವಾರ ರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಭಾರಿ ಬೆಂಕಿ ದುರ್ಘಟನೆ ಸಂಭವಿಸಿದೆ. ಈ ಅಗ್ನಿ ಅವಘಡದಲ್ಲಿ ಅಂದಾಜು 12 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಬೆಳಗಾವಿ ಹೊರವಲಯದ ಅಲತಗಾ ಕ್ರಾಸ್ ಬಳಿ ಇರುವ ಮಾಯಾ ಸಾಗರ್ ಪಾಟೀಲ ಅವರಿಗೆ ಸೇರಿದ ‘ಭಾವೇಶ್ವರಿ ಸ್ವೀಟ್ ಮಾರ್ಟ್’ ಬೇಕರಿಗೆ ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಆಕಸ್ಮಿಕ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಭಾರಿ ಬೆಂಕಿ ಹೊತ್ತಿಕೊಂಡಿದೆ. ಆತಿಯಾದ ಜ್ವಾಲೆಯಿಂದಾಗಿ ಬೇಕಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಆಹಾರ ಪದಾರ್ಥಗಳು, ಯಂತ್ರೋಪಕರಣಗಳು ಹಾಗೂ ಇಡೀ ಕಟ್ಟಡದ ಒಳಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ದುರ್ಘಟನೆಯ ಪ್ರಭಾವದಿಂದಾಗಿ ಅಕ್ಕಪಕ್ಕದ ಅಂಗಡಿಗಳಾದ ರೂಪೇಶ ಲಕ್ಷ್ಮಣ ಚೌಗುಲೆ ಹಾಗೂ ಯುವರಾಜ್ ಪಾಟೀಲ ಅವರ ಆಸ್ತಿ-ಪಾಸ್ತಿಗೂ ಹಾನಿಯಾಗಿರುವುದು ತಿಳಿದುಬಂದಿದೆ.
ಅಪಾಯದ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಸಹಾಯಕರಾದ ಹಾಗೂ ಕೆಪಿಸಿಸಿ ಸದಸ್ಯರಾದ ಮಲಗೌಡ ಪಾಟೀಲ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತ ಮಾಲೀಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಅವರು, ಸರ್ಕಾರದ ವತಿಯಿಂದ ಸಿಗಬೇಕಾದ ಪರಿಹಾರ ಹಾಗೂ ತುರ್ತು ನೆರವಿನ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ದಿಢೀರ್ ಸಂಭವಿಸಿದ ಈ ಅಗ್ನಿ ಅವಘಡದಿಂದ ಸಂತ್ರಸ್ತ ವ್ಯಾಪಾರಿಗಳು ಕಂಗಾಲಾಗಿದ್ದು, ಆಡಳಿತ ಯಂತ್ರವು ಶೀಘ್ರವೇ ಮಹಜರು ನಡೆಸಿ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
