Nippani

ನಿಪ್ಪಾಣಿಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ಜಾಲ ಭೇದಿಸಿದ ಅಧಿಕಾರಿಗಳು: ₹41.72 ಲಕ್ಷ ಮೌಲ್ಯದ ವಸ್ತುಗಳು ವಶ

Share

ನಿಪ್ಪಾಣಿ ತಾಲೂಕಿನ ಕೋಗನೊಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳ ಮೇಲೆ ತಹಶೀಲ್ದಾರ್ ಹಾಗೂ ಪೊಲೀಸರ ಜಂಟಿ ತಂಡ ದಾಳಿ ನಡೆಸಿದೆ. ಕಾರ್ಯಾಚರಣೆಯಲ್ಲಿ ಒಟ್ಟು 60,100 ಕೆ.ಜಿ. (60.1 ಟನ್) ಪಡಿತರ ಅಕ್ಕಿ ಹಾಗೂ ಎರಡು ಲಾರಿಗಳು ಸೇರಿದಂತೆ ₹41.72 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ.

​ಅಕ್ಟೋಬರ್ 5ರಂದು ನಡೆಸಿದ ಮೊದಲ ದಾಳಿಯಲ್ಲಿ ಹುಬ್ಬಳ್ಳಿಯಿಂದ ಗುಜರಾತ್‌ಗೆ ಸಾಗಿಸುತ್ತಿದ್ದ ₹6.62 ಲಕ್ಷ ಮೌಲ್ಯದ 30,100 ಕೆ.ಜಿ. ಅಕ್ಕಿ ಹಾಗೂ ₹16 ಲಕ್ಷ ಮೌಲ್ಯದ ಲಾರಿಯನ್ನು (KA-63 A-0313) ವಶಪಡಿಸಿಕೊಂಡು, ಮೊಹಮ್ಮದ್ ರಫೀಕ್ ಅತ್ತಾರ್ (52) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
​ಅಕ್ಟೋಬರ್ 6ರ ಮಧ್ಯರಾತ್ರಿ ಕೋಗನೊಳ್ಳಿ ಟೋಲ್ ನಾಕಾ ಬಳಿ ನಡೆಸಿದ ಎರಡನೇ ದಾಳಿಯಲ್ಲಿ ₹6.60 ಲಕ್ಷ ಮೌಲ್ಯದ 30,000 ಕೆ.ಜಿ. ಅಕ್ಕಿ ಹಾಗೂ ₹12.50 ಲಕ್ಷ ಮೌಲ್ಯದ ಲಾರಿಯನ್ನು (MH-09 EL-7060) ವಶಕ್ಕೆ ಪಡೆದು, ಮಹಾರಾಷ್ಟ್ರದ ರತನ್ ಬಬನ್ ಸದಾನಂದೆ (20) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

​ತಹಶೀಲ್ದಾರ್ ಸುರೇಶ್ ಮುಂಚೆ ಹಾಗೂ ಆಹಾರ ನಿರೀಕ್ಷಕ ಅಭಿಜಿತ್ ಗಾಯಕವಾಡ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.

Tags:

error: Content is protected !!