ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ಗ್ರಾಮದಲ್ಲಿ ಪ್ರಸಕ್ತ ವರ್ಷ ಮಳೆಯ ಪ್ರಮಾಣ ಅತ್ಯಲ್ಪವಾಗಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ, ಶ್ರೀ ಮೇಘರಾಜ (ಪರಮೇಶ್ವರ) ದೇವರ ಜಾತ್ರೆಯನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು.

ಸೋಮವಾರ ನಡೆದ ಜಾತ್ರೆಯ ಅಂಗವಾಗಿ ಡೊಳ್ಳು ವಾದನದೊಂದಿಗೆ ಸುಮಂಗಲೆಯರಿಂದ ಜಲ ಹಾಗೂ ಅಮೃತ ಕುಂಭಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಬಳಿಕ ದೇವರ ಜಪ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಅಪ್ಪಣ್ಣಾ ಗುರವ ಅವರು ದೇವರಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಪ್ರಸಕ್ತ ವರ್ಷ ಮಳೆಯ ಪ್ರಮಾಣ ಅತ್ಯಲ್ಪವಾಗಿದ್ದು, ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ರೈತರು ಹಾಗೂ ಭಕ್ತರು ಒಂದುಗೂಡಿ, ಹಿಂಗಾರು ಹಂಗಾಮಿನಲ್ಲಿ ಉತ್ತಮ ಪ್ರಮಾಣದ ಮಳೆಯಾಗಲಿ, ರೈತರ ಜಮೀನುಗಳಲ್ಲಿ ಉತ್ತಮ ಬೆಳೆ ಬೆಳೆಯಲಿ ಎಂದು ಮೇಘರಾಜ (ಪರಮೇಶ್ವರ) ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರು.
ಜಾತ್ರೆಯ ಅಂಗವಾಗಿ ಸಾವಿರಾರು ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಬನ್ನುರೆ ಕುಟುಂಬದವರ ವತಿಯಿಂದ ಜಾತ್ರೆಯ ಆಯೋಜನೆ ಮಾಡಲಾಗಿತ್ತು. ಗ್ರಾಮದ ಭಕ್ತರು, ಶಾಲಾ ವಿದ್ಯಾರ್ಥಿಗಳು ಹಾಗೂ ಸುಮಂಗಲೆಯರು ಸೇರಿದಂತೆ ಸಾವಿರಾರು ಜನರು ಜಾತ್ರೆಯಲ್ಲಿ ಪಾಲ್ಗೊಂಡು ಮಹಾಪ್ರಸಾದದ ಸದುಪಯೋಗ ಪಡೆದುಕೊಂಡರು.
