ನಿಪ್ಪಾಣಿ: ತಾಲ್ಲೂಕಿನ ಅಕ್ಕೋಳ ವಲಯದ ಪಾಂಗೇರಿ ‘ಎ’ ಕಾರ್ಯಕ್ಷೇತ್ರದಲ್ಲಿ ಇಂದು ಪ್ರಥಮ ಬಾರಿಗೆ ಡಿಜಿಪೇ (DGPAY) ಕಾರ್ಯಕ್ರಮದ ಮೂಲಕ ಎಇಪಿಎಸ್ (AEPS) ಆ್ಯಪ್ ಬಳಸಿ ಸದಸ್ಯರ ಖಾತೆಯಿಂದ ನಗದು ಹಿಂತೆಗೆದುಕೊಳ್ಳುವ ಸೇವೆಗೆ ಚಾಲನೆ ನೀಡಲಾಯಿತು.

ಗ್ರಾಮದ ಸಿಎಸ್ಸಿ (CSC) ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಚಿಕ್ಕಲವಾಲ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ರಾಜು ಪಾಟೀಲ ಹಾಗೂ ಒಕ್ಕೂಟದ ಪದಾಧಿಕಾರಿ ರಾಜಶ್ರೀ ಅವರ ಸಮ್ಮುಖದಲ್ಲಿ ಮೊದಲ ಬಾರಿಗೆ ಸದಸ್ಯರೊಬ್ಬರ ಖಾತೆಯಿಂದ ₹2,000 ನಗದನ್ನು ಯಶಸ್ವಿಯಾಗಿ ಹಿಂಪಡೆಯುವ (Withdrawal) ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಗ್ರಾಮೀಣ ಭಾಗದಲ್ಲಿಯೇ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಸಾರ್ವಜನಿಕರಿಗೆ ತಲುಪಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಸುಜಾತಾ, ತಾಲ್ಲೂಕು ಸಿಎಸ್ಸಿ ನೋಡಲ್ ಅಧಿಕಾರಿ ಶ್ರೀ ಆನಂದ್ ಎ. ಎಸ್., ಸಿಎಸ್ಸಿ ಸೇವಾದಾರರು, ಸೇವಾ ಪ್ರತಿನಿಧಿಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
