Chikkodi

ರೋಟರಿ ಡಯಾಲಿಸಿಸ್ ಕೇಂದ್ರ ಲೋಕಾರ್ಪಣೆ: ರೋಗಿಗಳಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ

Share

ಚಿಕ್ಕೋಡಿ:ರೋಟರಿ ಸಂಸ್ಥೆಯು ಮೂಲತಃ ವಿಶ್ವಾಸ ಮತ್ತು ಸಹಕಾರದ ಬುನಾದಿಯ ಮೇಲೆ ನಡೆಯುತ್ತಿದ್ದು, ಸಮಾಜಕ್ಕೆ ಉಪಯುಕ್ತ ಸೇವೆಗಳನ್ನು ಒದಗಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ದಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಡಿಮೆ ದರದಲ್ಲಿ ಡಯಾಲಿಸಿಸ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ ಎಂದು ರೋಟರಿಯ ಜಿಲ್ಲಾ ಗವರ್ನರ್ ಅರುಣ್ ಭಂಡಾರೆ ತಿಳಿಸಿದರು.

ಚಿಕ್ಕೋಡಿಯ ದಿಯಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ವೇಣುಗ್ರಾಮ-ಬೆಳಗಾವಿ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ₹52 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ‘ರೋಟರಿ ವೇಣುಗ್ರಾಮ ದಿಯಾ ಆಸ್ಪತ್ರೆ ಡಯಾಲಿಸಿಸ್ ಸೆಂಟರ್’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ರೋಟರಿ ಫೌಂಡೇಶನ್ ಗ್ಲೋಬಲ್ ಗ್ರಾಂಟ್ ಅಡಿಯಲ್ಲಿ ಕೈಗೊಂಡಿರುವ ಈ ಯೋಜನೆಯು ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಅತ್ಯಂತ ನೆರವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ದಿಯಾ ಆಸ್ಪತ್ರೆಯ ಸಂಸ್ಥಾಪಕ ಡಾ. ಸಂಜೀವ್ ಪಾಟೀಲ್ ಮಾತನಾಡಿ, “ಡಯಾಲಿಸಿಸ್ ಚಿಕಿತ್ಸೆಯು ರೋಗಿಗಳಿಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ದೊಡ್ಡ ಹೊರೆಯಾಗಿತ್ತು. ಇದೀಗ ರೋಟರಿ ಸಹಕಾರದೊಂದಿಗೆ ಈ ಕೇಂದ್ರ ಆರಂಭವಾಗಿರುವುದರಿಂದ ಗ್ರಾಮೀಣ ಭಾಗದ ರೋಗಿಗಳು ಚಿಕಿತ್ಸೆಗಾಗಿ ದೂರದ ನಗರಗಳಿಗೆ ಅಲೆಯುವ ಅಗತ್ಯವಿಲ್ಲ. ಆಸ್ಪತ್ರೆಯು ಯಾವಾಗಲೂ ಜನಪರ ಸೇವೆಯನ್ನು ನೀಡುತ್ತಾ ಬಂದಿದ್ದು, ಮುಂದೆಯೂ ಉತ್ತಮ ಆರೋಗ್ಯ ಸೇವೆಗಾಗಿ ಶ್ರಮಿಸಲಿದೆ,” ಎಂದು ತಿಳಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ದಿಯಾ ಆಸ್ಪತ್ರೆಯ ಸಹ-ಸಂಸ್ಥಾಪಕಿ ಡಾ. ಸಂಧ್ಯಾ ಪಾಟೀಲ್ ಮಾತನಾಡಿ, “ಪ್ರತಿ ವರ್ಷ ಲಕ್ಷಾಂತರ ಜನರು ಮೂತ್ರಪಿಂಡದ (ಕಿಡ್ನಿ) ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಇದರ ಚಿಕಿತ್ಸಾ ವೆಚ್ಚವು ಅಪಾರವಾಗಿರುತ್ತದೆ. ಆದರೆ, ಇದೀಗ ಚಿಕ್ಕೋಡಿಯ ದಿಯಾ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ, ಅಂದರೆ ಪ್ರತಿ ಡಯಾಲಿಸಿಸ್‌ಗೆ ಕೇವಲ ₹750 ರಿಯಾಯಿತಿ ದರದಲ್ಲಿ ಗುಣಮಟ್ಟದ ಸೇವೆ ಲಭ್ಯವಾಗಲಿದೆ,” ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಡಿಜಿಇ ಅಶೋಕ್ ನಾಯಕ್, ಮಾಜಿ ಅಧ್ಯಕ್ಷ ಶಶಿಕಾಂತ್ ನಾಯಕ್ ಸೇರಿದಂತೆ ಹಲವು ಗಣ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷ ಶಶಿಧರ್ ಪಾಟೀಲ್ ಸ್ವಾಗತಿಸಿದರು, ಕಾರ್ಯದರ್ಶಿ ಮಲ್ಲಿಕಾರ್ಜುನ್ ಮುರಗುಡೆ ವಂದಿಸಿದರು.

ಈ ಸಂದರ್ಭದಲ್ಲಿ ಸಿಟಿಇ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಉದ್ಯಮಿ ವಿಜಯ್ ಮಾಂಜರೇಕರ್, ಚಿಕ್ಕೋಡಿ ರೋಟರಿ ಅಧ್ಯಕ್ಷ ಸದಾಶಿವ್ ತಾರದಾಳೆ, ವಿನಯಕುಮಾರ್ ಬಾಳಿಕಾಯಿ, ಅರವಿಂದ್ ಖಡಕಬಾದಿ, ಮಹೇಶ್ ಗೋಲ್ಕರ್, ರಾಜೇಂದ್ರ ಪಾಟೀಲ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುಜಾತಾ ಪಾಟೀಲ್, ಶ್ರೀಧರ್ ಗಜನವರ್, ಅಶೋಕ್ ಪಾಠಕ್, ಸುವರ್ಣಾ ಬಬಲೇಶ್ವರ್ ಸೇರಿದಂತೆ ಬೆಳಗಾವಿ ಹಾಗೂ ಚಿಕ್ಕೋಡಿ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

Tags:

error: Content is protected !!