ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 2ನೇ ಸೋಮವಾರದ ಅಂಗವಾಗಿ ಭಕ್ತರ ಸಾಗರವೇ ಹರಿದುಬಂದಿದೆ. ಮುಂಜಾನೆಯಿಂದಲೇ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಶ್ರಾವಣ ಮಾಸದ ಎರಡನೇ ಸೋಮವಾರದ ಪವಿತ್ರ ದಿನದಂದು ಯಡೂರಿನ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಸುಕಿನ ಜಾವದಲ್ಲೇ ದೇವರಿಗೆ ವಿಶೇಷ ಪೂಜೆ, ಪುನಸ್ಕಾರ, ಮಹಾಮಂಗಳಾರತಿ ಹಾಗೂ ಪಲ್ಲಕ್ಕಿ ಸೇವೆ ಜರುಗಿತು. ಈ ದಿವ್ಯ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪುನೀತರಾದರು.
ಕೇವಲ ಕರ್ನಾಟಕ ಅಷ್ಟೇ ಅಲ್ಲದೆ, ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರು ಸಾಲಿನಲ್ಲಿ ನಿಂತು ಶ್ರೀವೀರಭದ್ರೇಶ್ವರ ದೇವರಿಗೆ ಅಭಿಷೇಕ ನೆರವೇರಿಸಿ, ದರ್ಶನ ಪಡೆದರು. ಶ್ರೀಶೈಲ್ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಯಡೂರ ಕ್ಷೇತ್ರವು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಒಟ್ಟಿನಲ್ಲಿ ಶ್ರಾವಣ ಮಾಸದ 2ನೇ ಸೋಮವಾರದಂದು ಯಡೂರ ವೀರಭದ್ರೇಶ್ವರನ ಸನ್ನಿಧಿಯಲ್ಲಿ ಭಕ್ತಿಯ ಪರಾಕಾಷ್ಟೆ ಮುಗಿಲು ಮುಟ್ಟಿದಂತು ಸತ್ಯ..
