ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಂಕ್ಸಬಾ ಪಟ್ಟಣದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ರಾಜು ಕರ್ನಾಟಿಕೆ ಅವರಿಗೆ ಸೇರಿದ ಸಾಕು ನಾಯಿಯನ್ನು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಧೈರ್ಯದಿಂದ ಕಾರ್ಯಾಚರಣೆ ನಡೆಸಿ ಜೀವಂತವಾಗಿ ಹೊರತೆಗೆದು ಮಾನವೀಯತೆ ಮೆರೆದಿದ್ದಾರೆ.

ಚಿಕ್ಕೋಡಿ ತಾಲೂಕಿನ ಯಂಕ್ಸಬಾ ಪಟ್ಟಣದ ಹೊರವಲಯದಲ್ಲಿರುವ ಕರ್ನಾಟಿಕೆ ಕೋಡಿಯ ತೆರೆದ ಬಾವಿಯಲ್ಲಿ ಸಾಕು ನಾಯಿಯೊಂದು ಕಾಲು ಜಾರಿ ಬಿದ್ದಿತ್ತು. ಬಾವಿಯಲ್ಲಿ ನೀರು ಇದ್ದುದರಿಂದ ನಾಯಿಯು ಮೇಲಕ್ಕೆ ಬರಲಾಗದೆ ಪರದಾಡುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೇ ಕಾರ್ಯಾಚರಣೆ ಆರಂಭಿಸಿ, ತೆರೆದ ಬಾವಿಗೆ ಇಳಿದು ನಾಯಿಗೆ ಯಾವುದೇ ಅಪಾಯವಾಗದಂತೆ ಎಚ್ಚರಿಕೆಯಿಂದ ಮೇಲಕ್ಕೆತ್ತಿದರು. ಸಕಾಲದಲ್ಲಿ ಸ್ಪಂದಿಸಿ ಮೂಕ ಪ್ರಾಣಿಯ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿಗಳ ಸಾಹಸಿಕ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
