BALLARI

ಕೊನೆ ಅಂಚಿನ ಜಮೀನುಗಳಿಗೆ ತಲುಪದ ತುಂಗಭದ್ರಾ ಜಲಾಶಯದ ನೀರು!!!

Share

ತುಂಗಭದ್ರಾ ಜಲಾಶಯದಿಂದ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಕೇವಲ ಕರ್ನಾಟಕದ ಪಾಲಿನ ನೀರು ಮಾತ್ರ ಹರಿಸುತ್ತಿರುವುದರಿಂದ ಗಡಿ ಭಾಗದ ರೈತರಿಗೆ ತೀವ್ರ ತೊಂದರೆಯಾಗಿದೆ. ಹಿಂದಿನಂತೆ ಎರಡೂ ರಾಜ್ಯಗಳ ಸಮನ್ವಯದ ಮೂಲಕ ಒಟ್ಟಿಗೆ ನೀರು ಹರಿಸಬೇಕು ಎಂದು ಬಳ್ಳಾರಿ ಭಾಗದ ರೈತರು ಆಗ್ರಹಿಸಿದ್ದಾರೆ.
ತುಂಗಭದ್ರಾ ಅಣೆಕಟ್ಟೆಯಿಂದ ಎಡದಂಡೆ ಕಾಲುವೆಗೆ 4 ಸಾವಿರ ಕ್ಯೂಸೆಕ್ ಹಾಗೂ ಬಲದಂಡೆ ಕಾಲುವೆಗೆ 8 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಬಳ್ಳಾರಿ ಮೂಲಕ ಆಂಧ್ರಪ್ರದೇಶದತ್ತ ಹರಿಯುವ ಬಲದಂಡೆ ಕಾಲುವೆಯ ನೀರನ್ನು ಪ್ರಸ್ತುತ ಕೇವಲ ಕರ್ನಾಟಕದ ಪಾಲಿನ ನೀರಿನೊಂದಿಗೆ ಮಾತ್ರ ಹರಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಜಂಟಿ ಸಮನ್ವಯದೊಂದಿಗೆ ಏಕಕಾಲಕ್ಕೆ ನೀರು ಹರಿಸಲಾಗುತ್ತಿತ್ತು. ಇದರಿಂದ ಕಾಲುವೆಗಳು ತುಂಬಿ ಹರಿದು ಕೊನೆ ಅಂಚಿನ ಜಮೀನುಗಳಿಗೂ ಸರಾಗವಾಗಿ ನೀರು ತಲುಪುತ್ತಿತ್ತು.
ಆದರೆ ಪ್ರಸ್ತುತ ಎರಡೂ ರಾಜ್ಯಗಳ ಪಾಲಿನ ನೀರು ಒಟ್ಟಿಗೆ ಹರಿಯದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ನೀರು ಮುಂದೆ ಸಾಗುತ್ತಿಲ್ಲ ಎಂದು ಗಡಿ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲುವೆಗಳು ತುಂಬಿ ಹರಿಯದೆ ಕೊನೆ ಅಂಚಿನ (ಎಂಡ್) ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲವಾದ್ದರಿಂದ, ಭತ್ತದ ನಾಟಿ ಸೇರಿದಂತೆ ಪ್ರಮುಖ ಬೆಳೆಗಳಿಗೆ ತೀವ್ರ ನೀರಿನ ಸಂಕಷ್ಟ ಎದುರಾಗಿದೆ. ಕೂಡಲೇ ಎಚ್ಚೆತ್ತುಕೊಳ್ಳುವಂತೆ ಒತ್ತಾಯಿಸಿರುವ ರೈತರು, ಕರ್ನಾಟಕ ಹಾಗೂ ಆಂಧ್ರಪ್ರದೇಶ ಎರಡೂ ಸರ್ಕಾರಗಳು ಪರಸ್ಪರ ಸಮನ್ವಯ ಸಾಧಿಸಿ ಕಾಲುವೆಗೆ ಅಗತ್ಯ ಪ್ರಮಾಣದ ನೀರು ಹರಿಸುವ ಮೂಲಕ ರೈತರ ಬೆಳೆಗಳನ್ನು ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

Tags:

error: Content is protected !!