ಚಿಕ್ಕೋಡಿ:ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದಾಗಿ ಕೃಷ್ಣಾ ನದಿ ತೀರದ ರೈತರ ಕೃಷಿ ಭೂಮಿಗೆ ನೀರು ಪೂರೈಸುವ ಪೈಪ್ಲೈನ್ಗಳು ಹೆದ್ದಾರಿಯ ಮಣ್ಣಿನ ಅಡಿಯಲ್ಲಿದ್ದು, ತೀವ್ರವಾಗಿ ಹಾನಿಗೊಳಗಾಗಿವೆ. ಕೆಲವು ಕಡೆಗಳಲ್ಲಿ ಈಗಾಗಲೇ ಪೈಪ್ಲೈನ್ಗಳು ಒಡೆದು ಹೋಗಿದ್ದು, ರೈತರ ನೀರಾವರಿ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಈ ಕುರಿತು ಸೂಕ್ತ ನಿರ್ಧಾರ ಕೈಗೊಂಡು ತಮಗೆ ಪರಿಹಾರ ಒದಗಿಸಬೇಕೆಂದು ಕೋರಿ ಇತ್ತೀಚೆಗೆ ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಈ ಸಮಸ್ಯೆಯ ಗಂಭೀರತೆಯನ್ನು ಮನಗಂಡ ರೈತರು, ಪದ್ಮಶ್ರೀ ಡಾ. ಪ್ರಭಾಕರ್ ಕೋರೆ ಅವರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡರು. ಕೂಡಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿದ್ದರು.
ರೈತರ ಮನವಿಗೆ ತಕ್ಷಣವೇ ಸ್ಪಂದಿಸಿದ ಪದ್ಮಶ್ರೀ ಡಾ. ಪ್ರಭಾಕರ್ ಕೋರೆ ಅವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ರೈತರ ಕಷ್ಟ-ನಷ್ಟಗಳನ್ನು ಅಧಿಕಾರಿಗಳ ಗಮನಕ್ಕೆ ತಂದ ಅವರು, ಸೌಹಾರ್ದಯುತವಾಗಿ ಚರ್ಚಿಸಿ ಸಮಸ್ಯೆಗೆ ತಕ್ಷಣವೇ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.
ಇದೇ ವೇಳೆ ಮಾತನಾಡಿದ ಡಾ. ಕೋರೆ ಅವರು, “ಒಂದೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ರೀತಿಯ ಅಡೆತಡೆಯಾಗದಂತೆ ರೈತರು ಎಚ್ಚರ ವಹಿಸಬೇಕು. ಇನ್ನೊಂದೆಡೆ, ಅಧಿಕಾರಿಗಳು ರೈತರೊಂದಿಗೆ ಉದ್ಧಟತನದಿಂದ ವರ್ತಿಸದೆ, ಅವರ ಸಮಸ್ಯೆಗಳನ್ನು ಆಲಿಸಿ ಸೌಹಾರ್ದಯುತವಾಗಿ ಪರಿಹರಿಸಬೇಕು. ಈ ಭಾಗದ ರೈತರು ವಿವೇಕಿಗಳು ಮತ್ತು ಸಂಯಮ ಉಳ್ಳವರಾಗಿದ್ದು, ಹೆದ್ದಾರಿ ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಆದರೆ ಅಧಿಕಾರಿಗಳೂ ಸಹ ರೈತರಿಗೆ ಸಂಪೂರ್ಣ ಸಹಕಾರ ನೀಡಬೇಕು. ಪೈಪ್ಲೈನ್ ಹಾನಿಯಾಗದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ನಿರ್ದೇಶನ ನೀಡಿದರು.
ಡಾ. ಪ್ರಭಾಕರ್ ಕೋರೆ ಅವರ ಮಧ್ಯಸ್ಥಿಕೆಯ ನಂತರ, ಅಧಿಕಾರಿಗಳು ರೈತರಿಗೆ ಸೂಕ್ತ ಸಹಕಾರ ನೀಡುವ ಮತ್ತು ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಸುರೇಶ ಪಾಟೀಲ, ವಿಕಾಸ ಪಾಟೀಲ, ಬಸವರಾಜ ಕರಾಡಕರ, ಬಾಳಾಸಾಹೇಬ ಲಂಗೋಟೆ, ಪರಶುರಾಮ ಕೊಠಿವಾಲೆ, ಸಂಜಯ ಚೌಧರಿ, ವಿವೇಕ ಕಮತೆ, ತಾನಾಜಿ ಸಾಳುಂಖೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ರೈತರು ಉಪಸ್ಥಿತರಿದ್ದರು.
