Chikkodi

ಹೆದ್ದಾರಿ ಕಾಮಗಾರಿ ವೇಳೆ ಪೈಪ್‌ಲೈನ್ ಬೇರೆಡೆಗೆ ಸ್ಥಳಾಂತರಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ

Share

ಗೋಟೂರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವ್ಯಾಪ್ತಿಗೆ ಒಳಪಡುತ್ತಿರುವ ನೀರಾವರಿ ಪೈಪ್‌ಲೈನ್‌ಗಳನ್ನು ಬೇರೆಡೆಗೆ ಸುರಕ್ಷಿತವಾಗಿ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಚಿಕ್ಕೋಡಿ ತಾಲೂಕಿನ ವಿವಿಧ ಗ್ರಾಮಗಳ ರೈತರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಚಿಕ್ಕೋಡಿ ತಾಲೂಕಿನ ಅಂಕಲಿ, ಸಿದ್ಧಾಪುರವಾಡಿ, ರುಪಿನಾಳ, ಕೇರೂರ ಹಾಗೂ ಕಾಡಾಪುರ ಗ್ರಾಮಗಳ ರೈತರು ಈ ಮನವಿ ಸಲ್ಲಿಸಿದ್ದು, ತಮ್ಮ ಸಂಕಷ್ಟವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕೃಷ್ಣಾ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ವಿದ್ಯುತ್ ಪಂಪ್‌ಸೆಟ್ ಅಳವಡಿಸಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸರ್ವೇ ಮಾಡುವಾಗ ನೆಲದಲ್ಲಿದ್ದ ಪೈಪ್‌ಲೈನ್ ಮಾಹಿತಿಯನ್ನು ನಮಗೆ ನೀಡದೇ, ಗಮನಕ್ಕೂ ತಂದಿಲ್ಲ.

ಈಗ ಹೆದ್ದಾರಿ ಕಾಮಗಾರಿ ಪ್ರಾರಂಭಗೊಂಡಿದ್ದು, ನೆಲದೊಳಗಿದ್ದ ಪೈಪ್‌ಲೈನ್‌ಗಳು ಸಂಪೂರ್ಣ ಹಾಳಾಗುತ್ತಿವೆ. ಇದರಿಂದಾಗಿ ನಾವು ನೀರಾವರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಬೆಳೆಗಳಿಗೆ ನೀರಿಲ್ಲದೆ ತೀವ್ರ ತೊಂದರೆ ಎದುರಿಸುವಂತಾಗಿದೆ.

ಕಾಮಗಾರಿ ವ್ಯಾಪ್ತಿಯಲ್ಲಿರುವ ಪೈಪ್‌ಲೈನ್‌ಗಳನ್ನು ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸಿ, ಶಾಶ್ವತವಾಗಿ ನೀರಾವರಿ ಸೌಲಭ್ಯ ಕಲ್ಪಿಸಿಕೊಡಬೇಕು. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸದಿದ್ದರೆ, ಮುಂಬರುವ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡು ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ರೈತರು ತಹಸೀಲ್ದಾರರಿಗೆ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖ ರೈತರಾದ ಸುರೇಶ ಪಾಟೀಲ, ವಿಕಾಸ ಪಾಟೀಲ, ಪರಶುರಾಮ ಕೋರಿವಾಳೆ, ಬಾಳಾಸಾಹೇಬ ಲಂಗುಟಿ, ತಾನಾಜಿ ಸಾಳುಂಕೆ, ಶೇಖರ ರೆಹಮಾನೆ, ಸತ್ಯಪ್ಪ ಖೋತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!