ಮಹಾರಾಷ್ಟ್ರದ ಕೊಂಕಣ ಪ್ರದೇಶ ಹಾಗೂ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಯಡೂರ-ಕಲ್ಲೋಳ ಸೇತುವೆಯು ಈ ಬಾರಿಯ ಮಳೆಗಾಲದಲ್ಲಿ ಮೂರನೇ ಬಾರಿಗೆ ಜಲಾವೃತಗೊಂಡಿದೆ.

ಮಹಾರಾಷ್ಟ್ರದಿಂದ ಕಲ್ಲೋಳ ಬಳಿಯ ಕೃಷ್ಣಾ ನದಿಗೆ ಪ್ರಸ್ತುತ 47 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದೆ. ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇವತ್ತು ಒಂದೇ ದಿನದಲ್ಲಿ ಬರೋಬ್ಬರಿ 3 ಅಡಿಯಷ್ಟು ನೀರು ಏರಿಕೆಯಾಗಿದ್ದು, ಸೇತುವೆ ಸಂಪೂರ್ಣವಾಗಿ ಜಲಸವೃತಗೊಂಡಿದೆ. ಇದರಿಂದಾಗಿ ಸೇತುವೆ ಮೇಲಿನ ವಾಹನ ಹಾಗೂ ಸಾರ್ವಜನಿಕರ ಸಂಚಾರವನ್ನು ಬಂದ್ ಮಾಡಲಾಗಿದೆ.
ಇಂದು ಶ್ರಾವಣ ಮಾಸದ ಮೊದಲನೇ ಸೋಮವಾರ ಹಿನ್ನೆಲೆಯಲ್ಲಿ ಪ್ರಸಿದ್ಧ ಯಡೂರ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಆದರೆ ಸೇತುವೆ ಮುಳುಗಡೆಯಾಗಿರುವುದರಿಂದ ದೇವಸ್ಥಾನಕ್ಕೆ ತಲುಪಲು ಭಕ್ತರು ತೊಂದರೆ ಎದುರಿಸುವಂತಾಗಿದೆ.
ಸೇತುವೆ ಬಂದ್ ಆಗಿರುವ ಕಾರಣ ಭಕ್ತಾದಿಗಳು ಹಾಗೂ ಸಾರ್ವಜನಿಕರು ಯಡೂರ ಕ್ಷೇತ್ರಕ್ಕೆ ತಲುಪಲು ಅಂಕಲಿ ಮಾರ್ಗವಾಗಿ ಪರ್ಯಾಯ ರಸ್ತೆಯನ್ನು ಬಳಸಿಕೊಂಡು ಸಂಚರಿಸುತ್ತಿದ್ದಾರೆ.
