ಶ್ರಾವಣ ಮಾಸದ ಶುಭಾರಂಭದ ಹಿನ್ನೆಲೆಯಲ್ಲಿ ಬೆಳಗಾವಿಯ ಸರ್ವ ಲೋಕ್ ಸೇವಾ ಫೌಂಡೇಶನ್ ವತಿಯಿಂದ ಖಾನಾಪುರ ತಾಲೂಕಿನ ಲಕ್ಕೇಬೈಲ್ ಗ್ರಾಮದಲ್ಲಿ ಉಚಿತ ಸಸಿ ವಿತರಣೆ ಹಾಗೂ ನೆಡುವ ಸೇವಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವೀರೇಶ ಬಸಯ್ಯ ಹಿರೇಮಠ ಅವರ ನೇತೃತ್ವದಲ್ಲಿ 501 ಬಿಲ್ವಪತ್ರಿ ಸಸಿಗಳನ್ನು ಸದ್ಭಕ್ತರಿಗೆ ವಿತರಿಸಲಾಯಿತು.

ಖಾನಾಪುರ ತಾಲೂಕಿನ ಲಕ್ಕೇಬೈಲ್ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ದೇವಾಲಯದ ಆವರಣದಲ್ಲಿ ಸರ್ವ ಲೋಕ್ ಸೇವಾ ಫೌಂಡೇಶನ್ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಈ ವೃಕ್ಷಾರೋಪಣ ಕಾರ್ಯಕ್ರಮ ಜರುಗಿತು. ಶ್ರಾವಣ ಮಾಸದ ಶ್ರೇಷ್ಠತೆಯ ಸಂಕೇತವಾಗಿ ಫೌಂಡೇಶನ್ ವತಿಯಿಂದ 501 ಬಿಲ್ವಪತ್ರಿ ಸಸಿಗಳನ್ನು ಭಕ್ತರಿಗೆ ಉಚಿತವಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಬಿಲ್ವಪತ್ರಿ, ಶಮಿ ಹಾಗೂ ಅರಳಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವೀರೇಶ ಬಸಯ್ಯ ಹಿರೇಮಠ ಅವರು ಮಾತನಾಡಿ, ಧಾರ್ಮಿಕ ಹಾಗೂ ಪೌರಾಣಿಕ ಮಹತ್ವ ಹೊಂದಿರುವ ಬಿಲ್ವಪತ್ರಿ, ಶಮಿ ಮತ್ತು ಅರಳಿ ಗಿಡಗಳನ್ನು ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ತೋಟಗಳಲ್ಲಿ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಲಕೇಬೈಲ್ ಗ್ರಾಮದ ಸದ್ಭಕ್ತರು ಹಾಗೂ ಸರ್ವ ಲೋಕ್ ಸೇವಾ ಫೌಂಡೇಶನ್‌ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸೇವಾ ಕಾರ್ಯದಲ್ಲಿ ಭಾಗಿಯಾದರು.
