ನಾಡಿನಾದ್ಯಂತ ಇಂದು ನಾಗರ ಪಂಚಮಿಯ ಸಂಭ್ರಮ ಮನೆಮಾಡಿದ್ದು, ಹುತ್ತಕ್ಕೆ ಹಾಲೆರೆದು ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ಆದರೆ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಾಗರ ಪಂಚಮಿಯಂದೇ ವಿಸ್ಮಯಕಾರಿ ಘಟನೆಯೊಂದು ನಡೆದು ಸಾರ್ವಜನಿಕರನ್ನು ರೋಮಾಂಚನಗೊಳಿಸಿದೆ.

ನಂದಗಡ ಗ್ರಾಮದ ಬಸವರಾಜ್ ಕಾಕತ್ತಿ ಎಂಬುವರ ಮನೆಯ ಹಿತ್ತಲಿನಲ್ಲಿ ಕುಳಿತಿದ್ದ ಚಿಟ್ಟೆಯೊಂದು ಗ್ರಾಮಸ್ಥರಲ್ಲಿ ತೀವ್ರ ಆಶ್ಚರ್ಯ ಮೂಡಿಸಿದೆ. ನಾಗರ ಪಂಚಮಿಯ ಪವಿತ್ರ ದಿನದಂದೇ ಪ್ರತ್ಯಕ್ಷವಾದ ಈ ಪಾತರಗಿತ್ತಿಯ ರೆಕ್ಕೆಗಳ ಮೇಲೆ ಸ್ಪಷ್ಟವಾದ ನಾಗರಹಾವಿನ ಆಕೃತಿ ಗೋಚರಿಸಿದ್ದು, ಮೊದಲ ನೋಟಕ್ಕೆ ನಿಜವಾದ ನಾಗರಹಾವೇ ಕುಳಿತಿದೆಯೇನೋ ಎಂಬ ಭ್ರಮೆ ಮೂಡಿಸುವಂತಿತ್ತು. ಇದನ್ನು ಕಂಡ ಮನೆಯವರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಪಂಚಮಿಯ ಶುಭ ದಿನದಂದು ಸ್ವತಃ ನಾಗರಾಜನೇ ಚಿಟ್ಟೆಯ ರೂಪದಲ್ಲಿ ದರ್ಶನ ನೀಡಿದ್ದಾನೆ ಎಂದು ಭಾವಿಸಿ ಪುಲಕಿತಗೊಂಡಿದ್ದಾರೆ. ಸದ್ಯ ಈ ಅಪರೂಪದ ಹಾಗೂ ಆಕರ್ಷಕ ಪಾತರಗಿತ್ತಿಯನ್ನು ವೀಕ್ಷಿಸಲು ನಂದಗಡದ ಜನರು ಬಸವರಾಜ್ ಅವರ ಮನೆಗೆ ಆಗಮಿಸುತ್ತಿದ್ದು, ಈ ಪವಾಡದಂತಹ ದೃಶ್ಯ ಕಣ್ಣುಂಬಿಕೊಳ್ಳುತ್ತಿದ್ದಾರೆ.
