ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳವನ್ನು ಹಿಂದೂಪರ ಸಂಘಟನೆಗಳು ಶುದ್ಧೀಕರಣ ಮಾಡಿ ಅಸ್ಪೃಶ್ಯತೆ ಆಚರಿಸಿದ್ದನ್ನು ಖಂಡಿಸಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾಗವಾಡ ತಾಲೂಕು ಘಟಕದ ವತಿಯಿಂದ ಬೆಳಗಾವಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಶುಕ್ರವಾರ ಬೆಳಿಗ್ಗೆ ಬೆಳಗಾವಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸಂಜಯ್ ತಳವಲ್ಕರ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾಗವಾಡ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಜಯ್ ತಳವಲ್ಕರ್ ಮಾತನಾಡಿ, “ದೀನದಲಿತರ ನಾಯಕರಾದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಖರ್ಗೆ ಅವರು ಭಾಷಣ ಮಾಡಿದ ಎರಡು ದಿನಗಳ ನಂತರ (ದಿನಾಂಕ 10ರಂದು) ರಾಮಲೀಲಾ ಮೈದಾನದಲ್ಲಿ ಶ್ರೀರಾಮಸೇನೆ ಧರ್ಮಾರ್ಥ ಸೇವಾ ನ್ಯಾಸ ಸಂಘಟನೆಯವರು, ಖರ್ಗೆ ಅವರು ಭಾಷಣ ಮಾಡಿದ ಸ್ಥಳದಲ್ಲಿ ರಾಮ ಮತ್ತು ಸೀತೆಯ ಚೌಕಟ್ಟಿನ ಪ್ರತಿಮೆಯನ್ನಿಟ್ಟು ಪೂಜೆ ಹಾಗೂ ಮಂತ್ರ ಪಠಣ ಮಾಡಿದ್ದಾರೆ. ಶಂಖ ಊದಿ, ಅರ್ಚಕರು ಸ್ಥಳದ ಸುತ್ತಲೂ ನೀರು ಸಿಂಪಡಿಸಿ, ಹಾಜರಿದ್ದವರಿಗೆ ತಿಲಕ ಹಚ್ಚಿ ‘ಶುದ್ಧೀಕರಣ’ ಮಾಡುವ ಮೂಲಕ ಅಸ್ಪೃಶ್ಯತೆ ಆಚರಿಸಿ ರಾಷ್ಟ್ರೀಯ ನಾಯಕರಿಗೆ ಅವಮಾನ ಮಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.
“ದಲಿತ ವ್ಯಕ್ತಿಯೊಬ್ಬರು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದನ್ನು ಅಸೂಯೆಯಿಂದ ಕಂಡು, ಈ ಕೃತ್ಯವನ್ನು ಮನುವಾದಿಗಳು, ಬಿಜೆಪಿ ಹಾಗೂ ಆರ್ಎಸ್ಎಸ್ನ ಹುನ್ನಾರದಿಂದ ಮಾಡಿದ್ದಾರೆ. ಈ ಕೃತ್ಯವು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆ ನಿರ್ಮೂಲನೆಯ ಕುರಿತು ತಿಳಿಸುತ್ತದೆ ಹಾಗೂ ಅದಕ್ಕೆ ಶಿಕ್ಷೆಯನ್ನು ವಿಧಿಸುತ್ತದೆ. ಆದ್ದರಿಂದ ಶ್ರೀರಾಮಸೇನೆ ಧರ್ಮಾರ್ಥ ಸೇವಾ ನ್ಯಾಸ ಸಂಘಟನೆಯನ್ನು ರದ್ದುಗೊಳಿಸಬೇಕು. ಅವರ ವಿರುದ್ಧ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1955ರ ಕಲಂ 18 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಕಲಂ 3(1)(ಎ), 3(1)(ಸಿ), 3(1)(ಜೆ), 3(11)ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಮನುವಾದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಂತರದ ಎರಡನೇ ಅಂಬೇಡ್ಕರ್ ಎಂದು ಕಾಣುತ್ತೇವೆ. ಇಂತಹ ರಾಷ್ಟ್ರೀಯ ನಾಯಕರ ಮೇಲೆ ಮನುವಾದಿಗಳು ನಡೆಸಿರುವ ಹೇಯ ಕೃತ್ಯದಂತಹ ಘಟನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹರಡದಂತೆ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಬೇಕು” ಎಂದು ದಲಿತ ಸಂಘಟನೆಯ ಜಿಲ್ಲಾ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಜಿಲ್ಲಾ ಮುಖಂಡರಾದ ಮಚ್ಚೀಂದ್ರ ಖಾಂಡೆಕರ್, ಜಿಲ್ಲಾ ಅಲ್ಪಸಂಖ್ಯಾತ ಡಿಎಸ್ಎಸ್ ಅಧ್ಯಕ್ಷ ಅಮೀನ್ ಜಾತಗಾರ, ಕುಮಾರ್ ಬನಸೋಡೆ, ರವಿ ಕಾಂಬಳೆ, ಕಾಗವಾಡ ತಾಲೂಕು ಅಧ್ಯಕ್ಷ ಸಚಿನ್ ಪೂಜಾರಿ, ನ್ಯಾಯವಾದಿ ಉಮೇಶ್ ಮನೋಜ್ ಗೋಳು, ಪ್ರಕಾಶ್ ಕಾಂಬಳೆ, ರವಿ ಕುರ್ಣೆ, ಬಾಪು ದೊಂಡಾರೆ, ವಿದ್ಯಾಧರ್ ದೊಂಡಾರೆ, ಅನಿಲ್ ಕಾಂಬಳೆ, ವಿನೋದ್ ದೇವಣೆ ಸೇರಿದಂತೆ ಕಾಗವಾಡ, ಅಥಣಿ, ರಾಯಬಾಗ್ ಹಾಗೂ ಚಿಕ್ಕೋಡಿ ಜಿಲ್ಲಾ ಮಟ್ಟದ ದಲಿತ ಮುಖಂಡರು ಮತ್ತು ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.
ತಹಶೀಲ್ದಾರ್ ಕಚೇರಿಯ ಹಿರಿಯ ಅಧಿಕಾರಿ ಎಂ.ಆರ್. ಪಾಟೀಲ್, ಉಪತಹಶೀಲ್ದಾರ್ ಅನ್ನಾಸಾಹೇಬ್ ಕೋರೆ ಹಾಗೂ ಪಿಎಸ್ಐ ರಾಘವೇಂದ್ರ ಖೋತ್ ಅವರು ಮನವಿ ಸ್ವೀಕರಿಸಿ, ಇದನ್ನು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
