Kagawad

ಐದು ಬಾರಿ ಶಾಸಕನಾಗಿದ್ದರೂ ಸಚಿವ ಸ್ಥಾನದ ಆಸೆ ಪಟ್ಟಿಲ್ಲ: ರಾಜು ಕಾಗೆ

Share

ಪ್ರತಿಯೊಬ್ಬರ ರಾಜಕೀಯ ಜೀವನದಲ್ಲಿ ಅಧಿಕಾರದ ಆಸೆ ಇರುವುದು ತಪ್ಪಲ್ಲ. ಆದರೆ, ನಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರೂ ‘ಸಚಿವ ಸ್ಥಾನ ನೀಡಿ’ ಎಂದು ರಾಜ್ಯ ಕಾಂಗ್ರೆಸ್‌ನ ಹಿರಿಯ ಮುಖಂಡರ ಬಳಿ ಕೇಳಿಲ್ಲ. 139 ಶಾಸಕರ ಪೈಕಿ 33 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ಸಾಧ್ಯ. ಉಳಿದ ಶಾಸಕರಿಗೂ ಸಚಿವ ಸ್ಥಾನ ನೀಡುವುದು ಅಸಾಧ್ಯ ಎಂಬ ವಾಸ್ತವ ತಿಳಿದಿದ್ದರೂ, ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ ನೀಡುತ್ತೇನೆ ಎನ್ನುವುದು ಸಮಂಜಸವಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಭಾನುವಾರ ಉಗಾರದ ಶತಾಯುಷಿ ಅಲಗೌಡ ಕಾಗೆ ಸಭಾಭವನದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುರಿತು ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಎಲ್ಲಾ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ವತಿಯಿಂದ ನಿರೀಕ್ಷಕರು ಕಾಗವಾಡ ಕ್ಷೇತ್ರಕ್ಕೆ ಆಗಮಿಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಕಾರ್ಯಕರ್ತರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ರಾಜು ಕಾಗೆ ಹೇಳಿದರು.

ಎಐಸಿಸಿ ನಿರೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಂಸದ ಡಾ. ಜಯಕುಮಾರ್ ಕಾರ್ಯಕರ್ತರು ಹಾಗೂ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದರು. ನಂತರ ಮಾತನಾಡಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೂವರು ನಾಮಪತ್ರ ಸಲ್ಲಿಸಿದ್ದು, ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಬುಧವಾರ (ಆಗಸ್ಟ್ 12) ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, ಎಐಸಿಸಿ ನಿರೀಕ್ಷಕರು ಸ್ವತಂತ್ರವಾಗಿ ಪ್ರತಿಯೊಬ್ಬರಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಪಕ್ಷದ ಎಲ್ಲಾ ಮುಖಂಡರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಎಐಸಿಸಿ ನಿರೀಕ್ಷಕರಾದ ಪಿ.ವಿ. ಮೋಹನ, ಎಂ. ನಾಗರಾಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ ಹನಮನ್ನವರ, ರಕ್ಷಿತಾ ಎ. ಟಿ, ಎಐಸಿಸಿ ಸಂಯೋಜಕ ಸಿ.ಎಂ. ಕುಮಾರ, ಮಾಜಿ ಶಾಸಕ ಮೋಹನರಾವ್ ಶಹಾ, ಕೆಪಿಸಿಸಿ ಸದಸ್ಯ ದಿಗ್ವಿಜಯ್ ಪವಾರ್ ದೇಸಾಯಿ, ಕೆಪಿಸಿಸಿ ಸದಸ್ಯ ಚಂದ್ರಕಾಂತ್ ಇಮ್ಮಡಿ, ಕಾಗವಾಡ ಬ್ಲಾಕ್ ಅಧ್ಯಕ್ಷ ವಿಜಯ ಅಕಿವಾಟೆ, ಅನಂತಪುರ ಬ್ಲಾಕ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನಾಯಕ ಬಾಗಡಿ, ಜಿಲ್ಲಾ ದಲಿತ ಸಂಘಟನೆ ಸಂಚಾಲಕ ಸಂಜಯ ತಳವಲಕರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೂವರು ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

– ಸುಕುಮಾರ ಬನ್ನೂರೆ, ಇನ್ ನ್ಯೂಸ್, ಕಾಗವಾಡ.

Tags:

error: Content is protected !!