Belagavi

ಬೆಳಗಾವಿಯಲ್ಲಿ ಉತ್ಸಾಹದ ಈದ್ ಮಿಲಾದ್ ಮೆರವಣಿಗೆ

Share

ಬೆಳಗಾವಿಯಲ್ಲಿ ಬಾರಾ ಇಮಾಮ್ ಬಿ ಮಾಲಿ ಮೊಹಲ್ಲಾ ಜಮಾತ್ ಮತ್ತು ಸಿರತ್ ಕಮಿಟಿ ವತಿಯಿಂದ ಈದ್ ಎ ಮಿಲಾದ್ ಹಬ್ಬವನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಿನ್ನಾ ಚೌಕ್‌ನಲ್ಲಿ ನಡೆದ ಧ್ವಜಾರೋಹಣ ಹಾಗೂ ಮೆರವಣಿಗೆಯಲ್ಲಿ ವಿವಿಧ ಧರ್ಮಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡು ಪರಸ್ಪರ ಶುಭ ಕೋರಿದರು.

ಬೆಳಗಾವಿ ನಗರದಲ್ಲಿ ಈದ್ ಎ ಮಿಲಾದ್ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದ್ದು, ಬಾರಾ ಇಮಾಮ್ ಬಿ ಮಾಲಿ ಮೊಹಲ್ಲಾ ಜಮಾತ್ ಮತ್ತು ಸಿರತ್ ಕಮಿಟಿ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿಯ ಜಿನ್ನಾ ಚೌಕ್‌ನಲ್ಲಿ ಧರ್ಮಗುರುಗಳಾದ ಮೌಲಾನಾ ಮುಫ್ತಿ ಮಂಜೂರ್, ಸಯ್ಯದ ಸಲಾದ್ದಿನ್ ಅಸಲಾಹಿ ಹಾಗೂ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಿ, ಮೆರವಣಿಗೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಉತ್ತರ ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿ ಮೊಹ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.ಈ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸೌಹಾರ್ದತೆಯ ಸಂದೇಶ ಸಾರಿತು.

ಯುವಕರು ಕೈಯಲ್ಲಿ ಧ್ವಜಗಳನ್ನು ಹಿಡಿದು ಡಿಜೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ನಲಿದರು. ಪರಸ್ಪರ ಹಸಿರು ಬಣ್ಣವನ್ನು ಹಚ್ಚಿಕೊಳ್ಳುವ ಮೂಲಕ ಯುವಕರು ಈದ್ ಹಬ್ಬದ ಸಂಭ್ರಮವನ್ನು ಮಡಚಿಕೊಳ್ಳಲಾರದಷ್ಟು ಉತ್ಸಾಹದಿಂದ ಆಚರಿಸಿ ಎಲ್ಲರ ಗಮನ ಸೆಳೆದರು.

ಮೆರವಣಿಗೆಯು ಜಿನ್ನಾ ಚೌಕನಿಂದ ಪ್ರಾರಂಭವಾಗಿ ಫೋರ್ಟ್ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಆರ್.ಟಿ.ಓ ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತ ಮತ್ತು ಕಾಲೇಜ್ ರಸ್ತೆ ಮಾರ್ಗವಾಗಿ ಸಾಗಿ ಕ್ಯಾಂಪ್‌ನ ಅಸಾದಖಾನ್ ದರ್ಗಾ ತಲುಪಿ ಯಶಸ್ವಿಯಾಗಿ ಕೊನೆಗೊಂಡಿತು.

Tags:

error: Content is protected !!