ಬೆಳಗಾವಿಯ ಜನನಿಬಿಡ ಪ್ರದೇಶವೊಂದರಲ್ಲಿ ಇಂದು ವಿದ್ಯುತ್ ಕಂಬದಲ್ಲಿ ಉಂಟಾದ ಅನಿರೀಕ್ಷಿತ ಶಾರ್ಟ್ ಸರ್ಕೀಟ್ನಿಂದಾಗಿ ಭಾರಿ ಆತಂಕ ಸೃಷ್ಟಿಯಾಯಿತು.
ಬೆಳಗಾವಿಯ ಟೆಂಗಿನಕೇರಿ ಗಲ್ಲಿಯ ರಸ್ತೆಯೊಂದರಲ್ಲಿರುವ ಬೀದಿ ದೀಪದ ಕಂಬದ ವಿದ್ಯುತ್ ಬಾಕ್ಸ್ನಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕೀಟ್ ಉಂಟಾಗಿ ಧಗಧಗನೆ ಬೆಂಕಿ ಹೊತ್ತಿಕೊಂಡಿತು. ಕಂಬದಿಂದ ಬೆಂಕಿಯ ಉಂಡೆಗಳು ಮತ್ತು ಕಿಡಿಗಳು ಕೆಳಗೆ ಉದುರುತ್ತಿದ್ದಂತೆ ಆ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸವಾರರು ಜೀವಭಯದಿಂದ ಗಾಬಗೊಂಡು ಹಿಂದೆ ಸರಿದರು. ಇದನ್ನು ಕಂಡು ಸ್ಥಳದಲ್ಲಿದ್ದ ಸಾರ್ವಜನಿಕರಲ್ಲಿ ಭಾರಿ ಆತಂಕ ಮೂಡಿತು. ಕೂಡಲೇ ಎಚ್ಚೆತ್ತ ಸಾಹಸಿ ಸ್ಥಳೀಯರು ಧೈರ್ಯ ಮಾಡಿ ನೀರು ಸುರಿದು ಬೆಂಕಿಯನ್ನು ತಹಬಂದಿಗೆ ತರಲು ಪ್ರಾಥಮಿಕ ಪ್ರಯತ್ನ ನಡೆಸಿದರು. ಬಳಿಕ ತಕ್ಷಣವೇ ಸ್ಥಳೀಯ ಲೈನ್ ಮೇನ್ಗೆ ಕರೆ ಮಾಡಿ ಕರೆಸಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಯಾವುದೇ ಪ್ರಾಣಹಾಯವಾಗಲಿ ಅಥವಾ ದೊಡ್ಡ ಮಟ್ಟದ ಆಪತ್ತಾಗಲಿ ಸಂಭವಿಸದ ಕಾರಣ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

