Belagavi

ಆರೇ ತಿಂಗಳಲ್ಲೇ ಮತ್ತೇ ಹಾಳಾದ ಬೆಳಗಾವಿಯ ಮಜಗಾಂವ ಮೂರನೇ ಗೇಟ್ ಓವರ್ ಬ್ರಿಡ್ಜ್ ಬಳಿಯ ರಸ್ತೆ…

Share

ಬೆಳಗಾವಿಯ ಮಜಗಾಂವ ಮೂರನೇ ಗೇಟ್ ಓವರ್ ಬ್ರಿಡ್ಜ್ ಬಳಿ ಕೇವಲ ಆರು ತಿಂಗಳ ಹಿಂದೆ ಮಾಡಿದ ರಸ್ತೆ ಮತ್ತೆ ಹದಗೆಟ್ಟು ಹೋಗಿದೆ. ಕಳಪೆ ಕಾಮಗಾರಿಯಿಂದಾಗಿ ವಾಹನ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಸ್ಥಳೀಯ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ತೀವ್ರವಾಗಿ ಆಗ್ರಹಿಸಿದ್ದಾರೆ.
ಬೆಳಗಾವಿಯ ಮಜಗಾಂವ ಮೂರನೇ ಗೇಟ್ ಬಳಿಯ ಓವರ್ ಬ್ರಿಡ್ಜ್ ರಸ್ತೆಯನ್ನು ಸಾರ್ವಜನಿಕರ ಸುದೀರ್ಘ ಹೋರಾಟದ ಫಲವಾಗಿ ಸುಮಾರು ಆರು ತಿಂಗಳ ಹಿಂದಷ್ಟೇ ದುರಸ್ತಿ ಮಾಡಲಾಗಿತ್ತು. ಆದರೆ, ಕಾಮಗಾರಿ ಮುಗಿದು ಕೇವಲ ಅರ್ಧ ವರ್ಷ ಕಳೆಯುವುದರೊಳಗೆ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಕಳಪೆ ಕಾಮಗಾರಿಯ ನೈಜ ಮುಖ ಬಯಲಾಗಿದೆ. ಇದರಿಂದ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸವಾರರು ಸಂಚಾರ ನಡೆಸಲು ಹರಸಾಹಸ ಪಡುವಂತಾಗಿದೆ. ಈ ಹಿನ್ನೆಲೆ ಸ್ಥಳೀಯರು ಗುಂಡಿಗಳಲ್ಲಿ ಸಸಿಗಳನ್ನು ನೆಟ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ಪರಸ್ಪರ ಮುಖಾಮುಖಿ ಅಥವಾ ಹಿಂಬಡಿಯಿಂದ ಬರುವ ವಾಹನಗಳಿಗೆ ಸಿಲುಕಿ ಭೀಕರ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ. ಗುತ್ತಿಗೆದಾರರು ಮೂರು ವರ್ಷಗಳ ಗ್ಯಾರೆಂಟಿ ನೀಡಿದ್ದರೂ, ಸರಿಯಾದ ರೀತಿಯಲ್ಲಿ ರೀಫಿಲ್ಲಿಂಗ್ ಮಾಡಿಲ್ಲ. ಇದರೊಂದಿಗೆ ಡಿಮಾರ್ಟ್ ಬದಿಯ ರಸ್ತೆಯಲ್ಲಿ ಒಂದು ಕಡೆ ಸಿಸಿ ರಸ್ತೆ ಮಾಡಿ, ಇನ್ನೊಂದು ಕಡೆ ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ಡಾಂಬರೀಕರಣದ ಹೆಸರಿನಲ್ಲಿ ಕೇವಲ ರಾಕೆಲ್ ಮಿಕ್ಸ್ ಮತ್ತು ಖಡಿ ಹಾಕಿ ಕೈ ತೊಳೆದುಕೊಂಡಿರುವುದು ಖಂಡನೀಯ.

ಮತ್ತೊಂದೆಡೆ, ಸಿಸಿ ರಸ್ತೆ ಕಾಮಗಾರಿಯನ್ನು ಅಸ್ತಿತ್ವದಲ್ಲಿರುವ ಕಟ್ಟಡಗಳು ಹಾಗೂ ಫುಟ್‌ಪಾತ್ ಮಟ್ಟಕ್ಕಿಂತ ಅತ್ಯಂತ ಎತ್ತರದಲ್ಲಿ ಮಾಡಿರುವುದರಿಂದ, ಮಳೆಬಂದಾಗ ರಸ್ತೆ ನೀರು ನೇರವಾಗಿ ಜನಸಾಮಾನ್ಯರ ಮನೆಗಳಿಗೆ ನುಗ್ಗುವ ಗಂಭೀರ ಸಮಸ್ಯೆ ಎದುರಾಗಿದೆ. ಕೂಡಲೇ ಜಿಲ್ಲಾ ಆಡಳಿತ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರು ಎಚ್ಚೆತ್ತುಕೊಂಡು, ವೈಜ್ಞಾನಿಕ ರೀತಿಯಲ್ಲಿ ಮ್ಯಾಪಿಂಗ್ ನಡೆಸಿ ರಸ್ತೆಯನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಮಾಜಿ ನಗರಸೇವಕ ವಿನಾಯಕ ಗುಂಜಟ್ಕರ್ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!