ನಿಪ್ಪಾಣಿ ಸಮೀಪದ ಪ್ರಸಿದ್ಧ ತವಂದಿ ಘಾಟನ ಬಳಿ ವ್ಯಕ್ತಿಯೊಬ್ಬರ ಮುಖ ಜಜ್ಜಿ ಕೊಲೆ ಮಾಡಲಾಗಿರುವ ಭೀಕರ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಸಮೀಪದ ಪ್ರದೇಶಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಮೃತರನ್ನು ಗಡಿಹಿಂಗ್ಲಜ ತಾಲೂಕಿನ ಹಿಟ್ನಿ ನಿವಾಸಿ ಮಹಮದ್ ಸಮಶೇರ್ ಖಲಿಫ್ (೫೨) ಎಂದು ಗುರುತಿಸಲಾಗಿದೆ. ಮೃತರು ಸ್ಥಳೀಯ ಅಪ್ಪಾಸಾಹೇಬ ನಲವಡೆ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು.
ಬುಧವಾರ ಬೆಳಿಗ್ಗೆ ತವಂದಿ ಬೆಟ್ಟದ ಬಳಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ ಕಂಡುಬಂದಿದೆ. ತಕ್ಷಣವೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಿಪ್ಪಾಣಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡ ಕಲ್ಲಿನಿಂದ ಮುಖ ಹಾಗೂ ತಲೆಗೆ ತೀವ್ರವಾಗಿ ಹೊಡೆದು ಕೊಲೆ ಮಾಡಲಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಸ್ಥಳ ಮಹಜರು ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಹಾತ್ಮ ಗಾಂಧಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತರ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಸಹೋದರನನ್ನು ಅಗಲಿದ್ದಾರೆ.
ಈ ಕುರಿತು ಮೃತರ ಪತ್ನಿ ನಸೀಮಾ ನೀಡಿದ ದೂರಿನನ್ವಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ನಿಖರ ಕಾರಣ ಹಾಗೂ ಕೊಲೆಗಾರರ ಪತ್ತೆಗೆ ಉಪನಿರೀಕ್ಷಕ ಶಿವರಾಜ್ ನಾಯ್ಕವಾಡಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
