ಹುಕ್ಕೇರಿ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಹಾಗೂ ಸಂಭ್ರಮದಿಂದ ಮಹಮ್ಮದ್ ಪೈಗಂಬರ್ ಪ್ರವಾದಿಗಳ ಜಯಂತ್ಯುತ್ಸವವಾದ ‘ಈದ್ ಮಿಲಾದ್’ ಹಬ್ಬವನ್ನು ಆಚರಿಸಿದರು.


ಹುಕ್ಕೇರಿ, ಸಂಕೇಶ್ವರ, ಯಮಕನಮರ್ಡಿ ಮತ್ತು ಪಾಶ್ಚಾಪುರ ನಗರಗಳಲ್ಲಿನ ಮಸೀದಿ ಹಾಗೂ ಹುಕ್ಕೇರಿ ನಗರದ ಪೈಗಂಬರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಮಾಧ್ಯಮಗಳೊಂದಿಗೆ ಮಾತನಾಡಿದ ಮೌಲಾನಾ ಕುತುಬುದ್ದೀನ್, “ಈದ್ ಎಂದರೆ ಸಂತೋಷ, ಮಿಲಾದ್ ಎಂದರೆ ಜನನಕಾಲ. ಆದ್ದರಿಂದ ಇದು ಮಹಮ್ಮದ್ ರವರ ಜಯಂತ್ಯೋತ್ಸವವಾಗಿದ್ದು, ದಾನ-ಪುಣ್ಯ ಹಾಗೂ ತ್ಯಾಗದ ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ. ಬಡವ-ಬಲ್ಲಿದ, ಶತ್ರು-ಮಿತ್ರ, ಗಂಡು-ಹೆಣ್ಣು ಎಂಬ ಯಾವುದೇ ಭೇದವಿಲ್ಲ ಎಂಬ ಸಂದೇಶವನ್ನು ಈದ್ ಮಿಲಾದ್ ಹಬ್ಬ ಸಾರುತ್ತದೆ. ಹುಕ್ಕೇರಿ ನಗರದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ” ಎಂದರು.

ಹನ್ನೊಂದು ಜಮಾತ್ ಅಧ್ಯಕ್ಷ ಸಲೀಂ ನದಾಪ್ ಮಾತನಾಡಿ, ದೇಶದಲ್ಲಿ ಶಾಂತಿ-ಸೌಹಾರ್ದತೆ ತುಂಬಲಿ, ಮಳೆ-ಬೆಳೆ ಚೆನ್ನಾಗಿ ಬಂದು ದೇಶದ ಜನತೆ ಸುಖದಿಂದ ಬಾಳಲಿ ಹಾಗೂ ಸಮಸ್ತ ಮುಸ್ಲಿಂ ಮತ್ತು ಹಿಂದೂ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಸಾವಿರಾರು ಮುಸ್ಲಿಂ ಸಮುದಾಯದ ಮುಖಂಡರು, ಮಕ್ಕಳು ಹಾಗೂ ಯುವಕರು ಶ್ವೇತ ವರ್ಣದ ಉಡುಪು ಧರಿಸಿ, ಕೈಯಲ್ಲಿ ಧರ್ಮ ಧ್ವಜ ಹಿಡಿದು ಮೆರವಣಿಗೆಯ ಮೂಲಕ ಮಾಸಾಬಿ ದರ್ಗಾಕ್ಕೆ ತೆರಳಿದರು. ನಂತರ ಹೊಸ ಬಸ್ ನಿಲ್ದಾಣ ಹತ್ತಿರದ ಪೈಗಂಬರ ದರ್ಗಾಕ್ಕೆ ಗಿಲಾಫ್ ಒಪ್ಪಿಸಿ, ಸಾಮೂಹಿಕವಾಗಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಬಾಬಾಜಾನ್ ಖಾಜಿ, ಮುಫ್ತಿ ಅಮಜದ್ ಖಾನ್, ರಹಮತುಲ್ಲಾ ಮಸಾಬರಿ, ಅಸ್ಲಂ ಶೇಕಬಡೆ, ಇಮ್ತಿಯಾಜ್ ನದಾಫ್, ಶಾಹಜಾನ್ ಬಡಗಾಂವಿ, ನಾಶೀರ್ ಸುತಾರ್, ಇಫ್ತಿಕಾರ್ ಪೀರಜಾದೆ, ಮಹಮ್ಮದ್ ನದಾಫ್, ಮಿರಾ ಚೌಧರಿ, ಕಬೀರ್ ಮಲ್ಲಿಕ, ಆದಮ್ ಖಾನ್ಜಾದೆ, ಸೋಹೇಬ್ ಬಡಗಾಂವಿ, ರಾಜು ಮುಜಾವರ್, ಮಲ್ಲಿಕ್ ಮುಜಾವರ್, ಇಸ್ಮಾಯಿಲ್ ಮುಜಾವರ್, ಆಲಮ್ ಮಕಾನ್ದಾರ್ ಮತ್ತು ವಿವಿಧ ಮದರಸಾ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಮೌಲಾನಾಗಳು ಹಾಜರಿದ್ದರು.
ಪೊಲೀಸ್ ಇನ್ಸ್ಪೆಕ್ಟರ್ ಶಿವಶಂಕರ ಗಣಾಚಾರಿ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಮಧ್ಯಾಹ್ನ ಪೈಗಂಬರ ದರ್ಗಾದಲ್ಲಿ 28ನೇ ವರ್ಷದ ಮಹಾಪ್ರಸಾದ ಜರುಗಿತು.
