ರಾಮನವಮಿ ಉತ್ಸವ ಸಮಿತಿ, ವಿಜಯಪುರ ವತಿಯಿಂದ ಗೋ ರಕ್ಷಾ ಅಭಿಯಾನದ ಅಂಗವಾಗಿ ಸಹಿ ಸಂಗ್ರಹ ಅಭಿಯಾನ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಒತ್ತಾಯಿಸಲಾಯಿತು. ಸಮಿತಿಯ ಅಧ್ಯಕ್ಷ ಉಮೇಶ್ ವಂದಾಲ ಮಾತನಾಡಿ, ಗೋಮಾತೆಯು ಬಹುಸಂಖ್ಯಾತ ಹಿಂದೂಗಳ ಆರಾಧ್ಯ ದೈವವಾಗಿದ್ದು, ಗೋ ರಕ್ಷಣೆ ಮಾಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಹೇಳಿದರು. ಗೋಮಾತೆಯನ್ನು ‘ರಾಷ್ಟ್ರೀಯ ಪ್ರಾಣಿ’ ಹಾಗೂ ‘ರಾಜ್ಯಮಾತೆ’ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು. ವಿಜಯಪುರ ಜಿಲ್ಲೆ ಮತ್ತು ನಗರದಲ್ಲಿ ಅನಧಿಕೃತ ಕಸಾಯಿಖಾನೆಗಳಲ್ಲಿ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಕಸಾಯಿಖಾನೆಗಳನ್ನು ಮುಚ್ಚಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ದೇಶಾದ್ಯಂತ ಗೋಮಾತೆಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಈ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಗೋ ರಕ್ಷಣೆ ಕುರಿತ ಜನಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಸಮಿತಿ ತಿಳಿಸಿದೆ.
