Athani

ಅಥಣಿ: ಕಾಲುವೆಯಲ್ಲಿ ಮುಳುಗಿ ಉತ್ತರ ಪ್ರದೇಶ ಮೂಲದ ಯುವಕ ಸಾವು

Share

ಸ್ನೇಹಿತರೊಂದಿಗೆ ಕಾಲುವೆಗೆ ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.

ಉತ್ತರಪ್ರದೇಶ ರಾಜ್ಯದ ಫತೇಪುರ ಜಿಲ್ಲೆಯ ಹತ್ತಗಾಂವ ಗ್ರಾಮದ ನಿವಾಸಿ ಕುಶಿಚೇಂದ್ರ ರಾಮಮನೋಹರ ಬಡಾಹ (23) ಮೃತಪಟ್ಟ ದುರ್ದೈವಿ. ಈತ ಕೂಲಿ ಕೆಲಸ ಅರಸಿ ಇಲ್ಲಿಗೆ ಆಗಮಿಸಿದ್ದ. ಮೃತ ಯುವಕನು ಆಜೂರ ಗ್ರಾಮದ ಹೊರವಲಯದಲ್ಲಿರುವ ಕಾಲುವೆಗೆ ತನ್ನ ಸ್ನೇಹಿತರೊಂದಿಗೆ ಸ್ನಾನ ಮಾಡಲು ತೆರಳಿದ್ದನು. ಈ ಸಂದರ್ಭದಲ್ಲಿ ನೀರಿಗಿಳಿದ ಯುವಕನಿಗೆ ಈಜು ಬಾರದ ಕಾರಣ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತರು ರಕ್ಷಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾಲುವೆಯಿಂದ ಯುವಕನ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಅಥಣಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Tags:

error: Content is protected !!