Belagavi

ಬೆಳಗಾವಿ ಜಿಲ್ಲೆಯ ಮುತಗಾದಲ್ಲಿ ಶ್ರದ್ಧಾ-ಭಕ್ತಿಯಿಂದ ಆರಂಭವಾದ ಶ್ರೀ ಭಾವೇಶ್ವರಿ ದೇವಿ ಜಾತ್ರೆ

Share

ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಭಾವೇಶ್ವರಿ ದೇವಿಯ ವಾರ್ಷಿಕ ಜಾತ್ರೆಯು ಅತ್ಯಂತ ಸಡಗರ ಹಾಗೂ ಧಾರ್ಮಿಕ ವಾತಾವರಣದಲ್ಲಿ ಆರಂಭಗೊಂಡಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ದೇವಿಯ ಒಟಿಗೆ ತೆಂಗಿನಕಾಯಿ ಬದಲಿಗೆ ಒಣಕೊಬ್ಬರಿ (ಖೋಬ್ರಾ) ಅರ್ಪಿಸುವ ಈ ಅಪರೂಪದ ಸಂಪ್ರದಾಯವು ಭಕ್ತರ ಪ್ರಮುಖ ಆಕರ್ಷಣೆಯಾಗಿದೆ.

 

ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಗ್ರಾಮದೇವತೆ ಶ್ರೀ ಭಾವೇಶ್ವರಿ ದೇವಿಯ ವಾರ್ಷಿಕ ಜಾತ್ರೆಗೆ ಶುಕ್ರವಾರ ಬೆಳಗಿನ ಜಾವದಿಂದಲೇ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಉಮೇಶ್ ಪೂರಿ , ಗ್ರಾಮದ ಲಕ್ಷ್ಮಿದೇವಿಯ ಮಾನವನ್ನು ಶ್ರೀ ಭಾವೇಶ್ವರಿ ದೇವಿಗೆ ನೀಡಲಾಗುತ್ತಿರುವುದರಿಂದ ಈ ಜಾತ್ರೆಯಲ್ಲಿ ತೆಂಗಿನಕಾಯಿಯ ಬದಲು ಕೊಬ್ಬರಿಯನ್ನು ಬಳಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕವಲ್ಲದೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ದೇವಿಯ ದರ್ಶನ ಪಡೆದು ಧನ್ಯತೆ ಮೆರೆಯುತ್ತಿದ್ದಾರೆ. ವಿಶೇಷವಾಗಿ ಮುತಗಾ ಹಾಗೂ ಖಾನಾಪುರ ತಾಲ್ಲೂಕಿನ ನಡುವಿನ ಐತಿಹಾಸಿಕ ಹಾಗೂ ಕೌಟುಂಬಿಕ ಬಾಂಧವ್ಯದಿಂದಾಗಿ ಖಾನಾಪುರ ಭಾಗದ ಭಕ್ತರ ಉಪಸ್ಥಿತಿಯೂ ಇಲ್ಲಿ ಅತ್ಯಂತ ಗಮನಾರ್ಹವಾಗಿದೆ ಎಂದು ಉಮೇಶ್ ಪೂರಿ ಹಂಚಿಕೊಂಡಿದ್ದಾರೆ.

ಜಾತ್ರೆಯು ಯಾವುದೇ ಅಡಚಣೆಯಿಲ್ಲದೆ ಶಾಂತಿಯುತವಾಗಿ ಹಾಗೂ ಸುರಳೀತವಾಗಿ ಜರುಗಲು ದೇವಸ್ಥಾನ ಸಮಿತಿ, ಗ್ರಾಮ ಸುಧಾರಣಾ ಮಂಡಳಿ, ಗ್ರಾಮ ಪಂಚಾಯತ್ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿರುವ ದೇವಸ್ಥಾನ ಪಂಚಕಮಿಟಿ ಸದಸ್ಯ ಭಾವು ಪಾಟೀಲ್, ಹೊರೂರಿನಿಂದ ಬರುವ ಭಕ್ತರು ವಾಹನಗಳನ್ನು ನಿಗದಿತ ಸ್ಥಳದಲ್ಲೇ ನಿಲ್ಲಿಸಿ ಪೊಲೀಸ್ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೆ, ದೇವಸ್ಥಾನ ಪಂಚಕಮಿಟಿ ಸದಸ್ಯ ಹೇಮಂತ್ ಪಾಟೀಲ್ ಮಾತನಾಡಿ, ಭಕ್ತರು ಪರಂಪರೆಯಂತೆ ಒಣಕೊಬ್ಬರಿ ಅಥವಾ ವಾಟಿ-ಕೋಪರೆಯನ್ನು ಮಾತ್ರ ದೇವಿಯ ಒಡಲಿಗೆ ಅರ್ಪಿಸಿ, ಜಾತ್ರೆಯ ಯಶಸ್ಸಿಗೆ ಕೈಜೋಡಿಸಬೇಕೆಂದು ಕೋರಿದ್ದಾರೆ.

Tags:

error: Content is protected !!