Vijaypura

ದ್ವಿಭಾಷಾ ಶಿಕ್ಷಣ ನೀತಿ, ಶಿಕ್ಷಕರ ನೇಮಕಾತಿ ಅಧಿಸೂಚನೆ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ

Share

ಸರ್ಕಾರಿ ಶಾಲೆಗಳಲ್ಲಿ ಜಾರಿಗೊಳಿಸಿರುವ ದ್ವಿಭಾಷಾ ಶಿಕ್ಷಣ ನೀತಿ ಹಾಗೂ ಶಿಕ್ಷಕರ ನೇಮಕಾತಿ ಕರಡು ಅಧಿಸೂಚನೆಯನ್ನು ವಿರೋಧಿಸಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ನೋಂ) ವಿಜಯಪುರ ಜಿಲ್ಲಾ ಸಮಿತಿಯು ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಪರಿಷತ್ತಿನ ಸಹ ಕಾರ್ಯದರ್ಶಿ ಮಯೂರಕುಮಾರ ತಿಳಗೂಳಕರ, ಐದನೇ ತರಗತಿಯವರೆಗೆ ಜಾರಿಗೊಳಿಸಿರುವ ದ್ವಿಭಾಷಾ ಶಿಕ್ಷಣ ನೀತಿಯು ಕನ್ನಡ ಭಾಷೆ ಹಾಗೂ ಮಾತೃಭಾಷಾ ಶಿಕ್ಷಣಕ್ಕೆ ಧಕ್ಕೆ ಉಂಟುಮಾಡಲಿದೆ ಎಂದು ಆರೋಪಿಸಿದರು.

ಕನ್ನಡ ಮಾಧ್ಯಮ ಶಿಕ್ಷಕರಿಗೆ ಕೇವಲ ಐದು ದಿನಗಳ ತರಬೇತಿ ನೀಡಿ ಆಂಗ್ಲ ಮಾಧ್ಯಮದಲ್ಲಿ ಬೋಧನೆಗೆ ನಿಯೋಜಿಸಿರುವುದು ಸಮರ್ಪಕ ಕ್ರಮವಲ್ಲ. ಕೆಲವು ಪಾಠಗಳು ಹಾಗೂ ಹಾಡುಗಳನ್ನು ಕೇವಲ ಇಂಗ್ಲಿಷ್‌ನಲ್ಲಿ ನೀಡಿರುವುದು ಮತ್ತು ಪರೀಕ್ಷೆಯಲ್ಲಿ ಇಂಗ್ಲಿಷ್‌ನಲ್ಲಿ ಉತ್ತರಿಸಿದವರಿಗೆ ಹೆಚ್ಚಿನ ಶ್ರೇಣಿ ನೀಡುವಂತೆ ಸೂಚಿಸಿರುವುದು ಕನ್ನಡ ವಿದ್ಯಾರ್ಥಿಗಳ ಮೇಲೆ ಪರೋಕ್ಷ ಒತ್ತಡ ಹೇರುವಂತಾಗಿದೆ ಎಂದು ದೂರಿದರು.
ಇದೇ ವೇಳೆ, 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಕರಡು ಅಧಿಸೂಚನೆಯಲ್ಲಿ ಕನ್ನಡ ಶಿಕ್ಷಕರ ನೇಮಕಾತಿಯನ್ನು ಕೈಬಿಟ್ಟಿರುವುದರ ಜೊತೆಗೆ ವಿವಿಧ ವಿಷಯಗಳ ಶಿಕ್ಷಕರಿಗೆ ಆಂಗ್ಲ ಭಾಷಾ ಪ್ರೌಢಿಮೆಯನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ವಿವೇಕ ಕುಲಕರ್ಣಿ ಮಾತನಾಡಿ, ದ್ವಿಭಾಷಾ ಶಿಕ್ಷಣ ನೀತಿಯು ಕನ್ನಡ ಭಾಷೆಯ ಉಳಿವಿಗೆ ಮಾರಕವಾಗಿದ್ದು, ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆನಂದ ಗೋಡ್ಸೆ, ವಿಭಾಗ ಸಂಯೋಜಕ ಶ್ರೀರಂಗ ಪುರಾಣಿಕ, ಕಾರ್ಯದರ್ಶಿ ಸುಕಾಂತ ಕುಲಕರ್ಣಿ, ಸಹ ಕಾರ್ಯದರ್ಶಿ ಅನೀಲ ಬೆಳುಂಡಗಿ, ಸದಸ್ಯರಾದ ಭಾರತಿ ಗೋಡ್ಸೆ ಹಾಗೂ ದಾನೇಶ್ವರಿ ಅಲ್ಲಾಳೆ ಉಪಸ್ಥಿತರಿದ್ದರು.

Tags:

error: Content is protected !!