ಔಷಧಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಮಿನಿ ಗೂಡ್ಸ್ ಟೆಂಪೋ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಟೆಂಪೋ ವಾಹನ ಸಿಲುಕಿಗೊಂಡು ಹಲವರಿಗೆ ಗಾಯವಾಗಿರುವ ಘಟನೆ ಧಾರವಾಡದ ಕೋರ್ಟ್ ವೃತದ ಬಳಿ ಗುರುವಾರ ತಡರಾತ್ರಿ ನಡೆದಿದ್ದು, ಕೆಪಕಾಲ ಸಂಚಾರ ಅಸ್ತವ್ಯಸ್ತತೆ ಉಂಟಾಗಿತ್ತು.

ನಗರದ ಕೋರ್ಟ್ ಸರ್ಕಲ್ ಬಳಿ ಧಾರವಾಡ ಹೋಟೆಲ್ ಮುಂಭಾಗದಲ್ಲಿ ಔಷಧಿ ಸಾಗಿಸುತ್ತಿದ್ದ ಟೆಂಪೊಗೆ, ಧಾರವಾಡದ ಕಡೆಗೆ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಡಿಕ್ಕಿಯ ತೀವ್ರತೆಗೆ ಟೆಂಪೊ ಎರಡು ವಾಹನಗಳ ನಡುವೆ ಸಿಲುಕಿಕೊಂಡಿದ್ದು, ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಘಟನೆಯಿಂದ ರಸ್ತೆಯಲ್ಲಿ ವಾಹನಗಳ ಸಾಲು ಉಂಟಾಗಿ ಸಾರ್ವಜನಿಕರು ಪರದಾಡಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆ ಬದಿಗೆ ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು. ಸ್ಥಳೀಯರು ಕೂಡ ವಾಹನಗಳನ್ನು ತೆರವುಗೊಳಿಸಲು ಪೊಲೀಸರಿಗೆ ಸಹಕರಿಸಿದರು. ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
