Belagavi

ವರ್ಷ ಕಳೆದರೂ ಬಾರದ ಆವಾಸ್ ಯೋಜನೆಯ ಕಂತು: ನಿಪ್ಪಾಣಿ ಭೋಜ್ ಗ್ರಾಮಸ್ಥರಿಂದ ಬೆಳಗಾವಿ ಡಿಸಿಗೆ ಮನವಿ

Share

ಮನೆ ಮಂಜೂರಾಗಿದ್ದರೂ ಸರ್ಕಾರದ ಅನುದಾನ ಬಾರದೆ ಬಡ ಕುಟುಂಬಗಳು ನಿರಾಶ್ರಿತರಾಗಿ ಬೀದಿಗೆ ಬಿದ್ದಿರುವ ಘಟನೆ ನಿಪ್ಪಾಣಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ವರ್ಷ ಕಳೆದರೂ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮುಂದಿನ ಕಂತು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಭೋಜ್ ಗ್ರಾಮದ ಸಂತ್ರಸ್ತರು ಬೆಳಗಾವಿ ಜಿಲ್ಲಾಧಿಕಾರಿಗಳ ಬಾಗಿಲು ತಟ್ಟಿದ್ದಾರೆ.

ನಿಪ್ಪಾಣಿ ತಾಲೂಕಿನ ಭೋಜ್ ಗ್ರಾಮದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳು ಮಂಜೂರಾಗಿದ್ದರೂ, ಕಳೆದ ಒಂದು ವರ್ಷದಿಂದ ಬಾಕಿ ಅನುದಾನ ಬಿಡುಗಡೆಯಾಗದೆ ಫಲಾನುಭವಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಭಾವತಿ ಅಶೋಕ್ ಕಾಂಬಳೆ ಅವರ ನೇತೃತ್ವದಲ್ಲಿ ಫಲಾನುಭವಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ (DC) ಮನವಿ ಪತ್ರ ಸಲ್ಲಿಸಿದ್ದಾರೆ.

ಗ್ರಾಮದ 10 ರಿಂದ 15 ಕುಟುಂಬಗಳಿಗೆ ತಲಾ 1.50 ಲಕ್ಷ ರೂಪಾಯಿ ಮಂಜೂರಾಗಿದ್ದು, ಅಡಿಪಾಯ ನಿರ್ಮಾಣಕ್ಕಾಗಿ ಆರಂಭದಲ್ಲಿ ಕೇವಲ 30,000 ರೂಪಾಯಿ ಬಿಡುಗಡೆಯಾಗಿತ್ತು. ಆದರೆ, ವರ್ಷ ಕಳೆದರೂ ಮುಂದಿನ ಕಂತು ಬಾರದ ಕಾರಣ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದರೆ ಯಾವುದೇ ಸೂಕ್ತ ಉತ್ತರವಿಲ್ಲದೆ, ಅರ್ಧಕ್ಕೆ ನಿಂತ ಮನೆಗಳು ಮಳೆಗಾಲದಲ್ಲಿ ಹಾಳಾಗುತ್ತಿದ್ದು ಬಡ ಕುಟುಂಬಗಳು ನಿರಾಶ್ರಿತರಾಗಿದ್ದಾರೆ.ಹಳೆಯ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ಕಟ್ಟಲಾಗದೆ, ಮಳೆಯಿಂದಾಗಿ ಜೀವನ ಸಾಗಿಸುವುದು ದುಸ್ತರವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಬಾಕಿ ಇರುವ ಅನುದಾನದ ಬಿಲ್ ಬಿಡುಗಡೆಗೊಳಿಸಿ, ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಆಸರೆಯಾಗಬೇಕೆಂದು ಆಗ್ರಹಿಸಲಾಗಿದೆ.

Tags:

error: Content is protected !!