ಸುಮಾರು ಹತ್ತು ದಿನಗಳ ವಿರಾಮದ ಬಳಿಕ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮತ್ತೆ ವರುಣದೇವ ಅಬ್ಬರಿಸುತ್ತಿದ್ದಾನೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪ್ರಸಿದ್ಧ ಬಟವಾಡೆ ಜಲಪಾತಕ್ಕೆ ಜೀವಕಳೆ ಬಂದಿದೆ.

ಖಾನಾಪುರ ತಾಲೂಕಿನ ಪ್ರಸಿದ್ಧ ಬಟವಾಡೆ ಜಲಪಾತ ಸುಮಾರು 50 ಅಡಿ ಎತ್ತರದಿಂದ ಹಾಲ್ನೋರೆಯಂತೆ ಧುಮ್ಮಿಕ್ಕುತ್ತಿದೆ. ಈ ಜಲವೈಭವ ನೋಡುಗರ ಕಣ್ಣು ತಂಪಾಗಿಸುತ್ತಿದೆ. ಆದರೆ, ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಜಲಪಾತಗಳ ಪ್ರವೇಶಕ್ಕೆ ನಿಷೇಧ ಹೇರಿದ್ದು, ಪ್ರವಾಸಿಗರಿಗೆ ತೀವ್ರ ನಿರಾಸೆಯಾಗಿದೆ.
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಸುರಿಯುತ್ತಿದ್ದು, ಖಾನಾಪುರ ತಾಲೂಕಿನಲ್ಲಿರುವ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ವಿಶೇಷವಾಗಿ ಬಟವಾಡೆ ಜಲಪಾತ 50 ಅಡಿ ಮೇಲಿಂದ ನೊರೆಹಾಳಿನಂತೆ ಧುಮ್ಮಿಕ್ಕುತ್ತಿದ್ದು, ವನಸಿರಿಯ ಮಧ್ಯೆ ಕಣ್ಣುಕೋರೈಸುವಂತೆ ಕಂಗೊಳಿಸುತ್ತಿದೆ. ಜಲಪಾತಗಳಿಗೆ ಹೊಸ ಮೆರಗು ಬಂದಿದೆಯಾದರೂ, ಪ್ರವಾಸಿಗರು ಮಾತ್ರ ಈ ನಿಸರ್ಗ ಸೌಂದರ್ಯವನ್ನು ಹತ್ತಿರದಿಂದ ಆಸ್ವಾದಿಸಲಾಗದೆ ವಂಚಿತರಾಗಿದ್ದಾರೆ. ಜಿಲ್ಲೆಯಲ್ಲಿ ಬಿರಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸಬಾರದೆಂದು ಅರಣ್ಯ ಇಲಾಖೆ ಜಲಪಾತಗಳ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ. ಪರಿಣಾಮವಾಗಿ, ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಬಟವಾಡೆ ಸೇರಿದಂತೆ ಜಿಲ್ಲೆಯ ಪ್ರಮುಖ ಜಲಪಾತಗಳ ಸುತ್ತಮುತ್ತಲಿನ ಪ್ರದೇಶಗಳು ಇದೀಗ ಜನರಿಲ್ಲದೇ ಸಂಪೂರ್ಣವಾಗಿ ಬಣಗುಟ್ಟುತ್ತಿವೆ.
