ಧಾರವಾಡ ಜಿಲ್ಲೆಯ ಅಳ್ನಾವಾರ ತಾಲೂಕಿನ ದಲಿತ ವ್ಯಕ್ತಿ ನಿಂಗಪ್ಪ ಮಾದರನನ್ನು ಸವರ್ಣೀಯ ವ್ಯಕ್ತಿ ಹತ್ಯೆ ಮಾಡಿದ್ದು, ಇದನ್ನು ಪೊಲೀಸರು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ ಆರೋಪಿ ಹಾಗೂ ಈ ಕೊಲೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ, ಧಾರವಾಡದಲ್ಲಿ ದಲಿತ ಸಂಘಟನೆ ಮುಖಂಡರು ಹಾಗೂ ಕುಂಬಾರಕೊಪ್ಪದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಡಿಸಿ ಕಚೇರಿ ಒಳಾವರಣಕ್ಕೆ ಹೋಗಲು ಪ್ರತಿಭಟನಾಕಾರರು ಮುಂದಾದರು. ಡಿಸಿಯವರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳು ಬಾರದ ಹಿನ್ನಲೆಯಲ್ಲಿ ಕಚೇರಿ ಒಳಾವರಣಕ್ಕೆ ನುಗ್ಗಲು ಮುಂದಾಗಿ ಗೇಟ್ ತಳ್ಳಿ ಒಳಗೆ ನುಗ್ಗಿದರು. ಈ ವೇಳೆ ತಡೆಯಲು ಪೊಲೀಸ್ ಸಿಬ್ಬಂದಿ ಮುಂದಾದ ಹಿನ್ನಲೆ ಕೆಲಕಾಲ ಡಿಸಿ ಕಚೇರಿ ಆವರಣದಲ್ಲಿ ಹೈಡ್ರಾಮ ಸೃಷ್ಟಿಯಾಯಿತು. ಕಳೆದ ಸೆಪ್ಟೆಂಬರ್‌ನಲ್ಲಿ ಅಲ್ನಾವರ ತಾಲೂಕಿನ ಕುಂಬಾರಗೊಪ್ಪ ಗ್ರಾಮದಲ್ಲಿ ನಿಂಗಪ್ಪ ಮಾದರ ಎಂಬ ದಲಿತ ವ್ಯಕ್ತಿಯ ಕೊಲೆಯಾಗಿತ್ತು. ಸವರ್ಣೀಯ ವ್ಯಕ್ತಿ ನಿಂಗಪ್ಪನನ್ನು ಹತ್ಯೆ ಮಾಡಿ ಆತನಿಗೆ ಕರೆಂಟ್ ಶಾಕ್ ಕೊಡಲಾಗಿದೆ. ಆದರೆ, ಅಳ್ಳಾವರ ಪೊಲೀಸರು ಇದೊಂದು ಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದರು. ಪೊಲೀಸರು ಇದನ್ನು ಕೊಲೆ ಎಂದು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿ ದಲಿತ ಮುಖಂಡರು ಹಾಗೂ ಕುಂಬಾರಗೊಪ್ಪ ಗ್ರಾಮಸ್ಥರು ಪೊಲೀಸ್ ನಡೆಯ ವಿರುದ್ಧ ಕಿಡಿಕಾರಿದರು. ಕೂಡಲೇ ನಿಂಗಪ್ಪಮಾದರ ಕೊಲೆ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿ ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
