Dharwad

ವಿನಯ್ ಕುಲಕರ್ಣಿಗೆ ಹೈಕೋರ್ಟ್ ಬಿಗ್ ರಿಲೀಫ್: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ಮಂಜೂರು, ಶಿಕ್ಷೆಗೆ ತಡೆ!

Share

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್‌್ಕನಿಂದ ಬಿಗ್ ರಿಲೀಫ್ ಸಿಕ್ಕಿದೆ. ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ತಮಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ, ಶಿಕ್ಷೆಯ ಆದೇಶವನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಿದೆ. 5 ಲಕ್ಷ ರೂಪಾಯಿ ಬಾಂಡ್, ಶ್ಯೂರಿಟಿ ಹಾಗೂ ಅನುಮತಿಯಿಲ್ಲದೆ ದೇಶ ತೊರೆಯಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ವಿಶೇಷ ನ್ಯಾಯಾಲಯದ ‘ದೋಷಿ’ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದರಿಂದ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವೂ ಸದ್ಯಕ್ಕೆ ಉಳಿದುಕೊಂಡಂತಾಗಿದೆ.

2016ರ ಜೂನ್ 15ರಂದು ಧಾರವಾಡದ ಜಿಮ್‌ನಲ್ಲಿ ನಡೆದಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ, ವಿನಯ್ ಕುಲಕರ್ಣಿ ಸೇರಿದಂತೆ 17 ಜನರನ್ನು ದೋಷಿಗಳೆಂದು ಪಟ್ಟಿ ಮಾಡಿತ್ತು. ಇದೀಗ ಜಾಮೀನು ಸಿಕ್ಕ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಯೋಗೀಶ್ ಗೌಡ ಅವರ ಸಹೋದರ ಗುರುನಾಥ್ ಗೌಡರ್, “ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ವಕೀಲ ಬಸವರಾಜ್ ಕೊರವರ ಅವರೊಂದಿಗೆ ಚರ್ಚಿಸಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ವಿನಯ್ ಕುಲಕರ್ಣಿ ಪರ ವಕೀಲ ಸುನೀಲ್ ಅವರು ಮಾತನಾಡಿ ‘ನಾವು ಎರಡು ಅರ್ಜಿ ಸಲ್ಲಿಸಿದ್ದೆವು. ನ್ಯಾಯಾಲಯ ನಮ್ಮ ಅರ್ಜಿಯನ್ನು ಪುರಸ್ಕರಿಸಿದೆ. ವಿನಯ್ ಕುಲಕರ್ಣಿ ಪರ ಸಿವಿ ನಾಗೇಶ್ ವಾದ ಮಾಡಿದ್ದರು. ವಿನಯ್ ಕುಲಕರ್ಣಿ ಪಾತ್ರ ಇಲ್ಲ ವೆಂದು ವಾದ ಮಾಡಿದ್ದೆವು’ ಎಂದು ತಿಳಿಸಿದರು. ವಿನಯ್ ಕುಲಕರ್ಣಿ ಇಂದೇ ಬಿಡುಗಡೆಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಜಾಮೀನು ಸಂಬಂಧ ದೃಢೀಕೃತ ಪತ್ರ ಇನ್ನೂ ಕೈಸೇರಿಲ್ಲ. ಆದೇಶದ ದೃಢೀಕೃತ ಪತ್ರ ಸಿಕ್ಕ ನಂತರ ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸ್ತೀವೆ ಎಂದು ತಿಳಿಸಿದರು.

ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಸಿಕ್ಕಿರುವ ಹಿನ್ನೆಲೆಯಲ್ಲಿ ಹೋರಾಟಗಾರ ಬಸವರಾಜ್ ಕೊರವರ್ ಪ್ರತಿಕ್ರಿಯಿಸಿದ್ದು, “ನ್ಯಾಯಾಲಯ ಯಾವ ಆಧಾರ ಹಾಗೂ ಅಂಶಗಳ ಮೇರೆಗೆ ತಡೆಯಾಜ್ಞೆ ನೀಡಿದೆ ಎಂಬುದನ್ನು ಆದೇಶದ ಪ್ರತಿ ಬಂದ ನಂತರವಷ್ಟೇ ನೋಡಿ ತಿಳಿಸುತ್ತೇವೆ” ಎಂದಿದ್ದಾರೆ. ಪ್ರಕರಣದಲ್ಲಿ ಸಾಕಷ್ಟು ಸಾಕ್ಷಿಗಳನ್ನು ಹೈಜಾಕ್ ಮಾಡುವ ಹಾಗೂ ನಾಶಪಡಿಸುವ ಯತ್ನಗಳು ಈಗಲೂ ನಡೆಯುತ್ತಿದ್ದರೂ, ಸಾಕ್ಷಿಗಳು ಧೈರ್ಯವಾಗಿ ಬಂದು ಹೇಳಿಕೆ ನೀಡಿದ್ದರು. ಹೀಗಿದ್ದರೂ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಬೇಸರ ತಂದಿದ್ದು, ಗುರುನಾಥ ಗೌಡರ ಕುಟುಂಬದ ನ್ಯಾಯಕ್ಕಾಗಿ ನಾವು ಕೋರ್ಟ್ ಮುಂದೆ ಯಾವ ಅಂಶ ಮಂಡಿಸಲು ವಿಫಲವಾಗಿದ್ದೇವೆ ಎಂಬುದನ್ನು ಪರಿಶೀಲಿಸಿ, ಶೀಘ್ರದಲ್ಲೇ ಈ ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!