ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಕಳ್ಳತನ ನಡೆದ ಕೇವಲ 24 ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಚಿನ್ನ ಹಾಗೂ ನಗದನ್ನು ದೋಚಿದ್ದ ಖದೀಮನನ್ನು ಬಂಧಿಸಿರುವ ಬೈಲಹೊಂಗಲ ಪೊಲೀಸರು, ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ನಡೆದಿದ್ದ ಭೀಕರ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಗ್ರಾಮದ ಮಹಾಂತೇಶ ಬಸಪ್ಪ ಬೋಗೂರ ಹಾಗೂ ಅವರ ಕುಟುಂಬಸ್ಥರು ಜಮೀನಿಗೆ ಕೆಲಸಕ್ಕೆ ತೆರಳಿದ್ದನ್ನು ಹೊಂಚು ಹಾಕಿ ನೋಡುತ್ತಿದ್ದ ಅದೇ ಗ್ರಾಮದ ಪ್ರಕಾಶ ರಾಯಪ್ಪ ಮಲ್ಲೂರ (40) ಎಂಬ ಖದೀಮ, ಮನೆಗೆ ನುಗ್ಗಿ ಕಳ್ಳತನ ಎಸಗಿದ್ದ. ಮನೆಯ ಟ್ರೆಜರಿಯಲ್ಲಿದ್ದ 5.49 ಲಕ್ಷ ರೂಪಾಯಿ ಮೌಲ್ಯದ 58 ಗ್ರಾಂ ಚಿನ್ನಾಭರಣಗಳು ಹಾಗೂ 48 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದ. ಈ ಕುರಿತು ಸಂತ್ರಸ್ತ ಮಹಾಂತೇಶ ಬೋಗೂರ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಾಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಬೈಲಹೊಂಗಲ ಉಪವಿಭಾಗದ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿಪಿಐ ಪ್ರಮೋದ್ ಸಿ. ಯಲಿಗಾರ ಮತ್ತು ಸಿಬ್ಬಂದಿ ತಂಡ ಚುರುಕಿನ ತನಿಖೆ ಕೈಗೊಂಡಿತು. ಕೇವಲ 24 ಗಂಟೆಗಳ ಅವಧಿಯಲ್ಲಿ ಆರೋಪಿ ಪ್ರಕಾಶ ಮಲ್ಲೂರನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು, ಆತನಿಂದ ಕದ್ದಿದ್ದ ಎಲ್ಲಾ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ಮಿಂಚಿನ ಕಾರ್ಯಾಚರಣೆಯನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
