ಕೊಲೆ, ದರೋಡೆ, ಹನಿಟ್ರ್ಯಾಪ್ ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬೆಳಗಾವಿಯ ಕುಖ್ಯಾತ ರೌಡಿಶೀಟರ್‌ಗೆ ಪೊಲೀಸರು ಕಠಿಣ ಶಿಕ್ಷೆ ವಿಧಿಸಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದ ರೌಡಿಶೀಟರ್ ಬಾಳೇಶ್‌ಗೆ ಸ್ಥಳಬದ್ಧತೆ ಆದೇಶ ಹೊರಡಿಸಲಾಗಿದ್ದು, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ನಿವಾಸಿಯಾದ ರೌಡಿಶೀಟರ್ ಬಾಳೇಶ ಅಲಿಯಾಸ್ ಬಾಳಪ್ಪ ಹೊಂಡಪನ್ನವರ (೨೬) ವಿರುದ್ಧ ಬೆಳಗಾವಿ ಜಿಲ್ಲಾ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ. ಈತನ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಹಾಗೂ ಹನಿ ಟ್ರ್ಯಾಪಿಂಗ್‌ಗೆ ಸಂಬಂಧಿಸಿದಂತೆ ಒಟ್ಟು ೯ ಅಪರಾಧಿಕ ಪ್ರಕರಣಗಳು ಮತ್ತು ೧೨ ಮುನ್ನೆಚ್ಚರಿಕಾ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ಶಾಂತಿ ಹಾಗೂ ಸುರಕ್ಷತೆಗೆ ಧಕ್ಕೆ ತರುತ್ತಿದ್ದ ಈತನ ಸಮಾಜಘಾತಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ ಮುರುಗೋಡ ಪೊಲೀಸ್ ಇನ್‌ಸ್ಪೆಕ್ಟರ್ ಇ.ಎಮ್. ಮಠಪತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ‘ಕರ್ನಾಟಕ ಪೊಲೀಸ್ ಕಾಯ್ದೆ ೧೯೮೫’ರ ಅಡಿಯಲ್ಲಿ ಈತನಿಗೆ ಸ್ಥಳಬದ್ಧತೆ (ಡಿಟೆನ್ಷನ್) ಆದೇಶ ಹೊರಡಿಸಲಾಗಿದ್ದು, ಸದ್ಯ ಈತನನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ರವಾನಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ
