Vijaypura

ಸಚಿವ ಎಂ.ಬಿ.ಪಾಟೀಲ ಸಿಟಿ ರೌಂಡ್ಸ್: ಸಚಿವರಿಗೆ ಡಿಸಿ ಜೊತೆಗೆ ಪಾಲಿಕೆ ಅಧಿಕಾರಿಗಳು ಹಾಗೂ ಸದಸ್ಯರು ಸಾಥ್

Share

ಐತಿಹಾಸಿಕ ವಿಜಯಪುರ ನಗರದಲ್ಲಿ ಮಳೆಗಾಲದ ವೇಳೆ ಮನೆಗಳಿಗೆ ನೀರು ನುಗ್ಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಿದೆ. ನಗರದ ಐತಿಹಾಸಿಕ ಕೋಟೆಗೋಡೆ ಸುತ್ತಲಿನ ಕಂದಕಗಳ ಸ್ವಚ್ಛತೆ ಮತ್ತು ತಡೆಗೋಡೆ ಕಾಮಗಾರಿಯನ್ನು ಸ್ವತಃ ಸಚಿವ ಎಂ.ಬಿ. ಪಾಟೀಲ ಪರಿಶೀಲನೆ ನಡೆಸಿ, ಸ್ಥಳದಲ್ಲೇ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಇಲ್ಲಿದೆ ಈ ಕುರಿತ ಒಂದು ವರದಿ.

ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ವಿಜಯಪುರ ನಗರದ ಹಲವು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಸಂಕಷ್ಟ ಅನುಭವಿಸಿದ್ದರು. ಇದೇ ಪರಿಸ್ಥಿತಿ ಮತ್ತೆ ಎದುರಾಗದಂತೆ ಕೋಟೆಗೋಡೆ ಸುತ್ತಲಿನ ಕಂದಕಗಳಲ್ಲಿ ಹೂಳು ತೆರವು, ಕಾಲುವೆಗಳ ಸ್ವಚ್ಛತೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಶುಕ್ರವಾರ ಶಿವಾಜಿ ವೃತ್ತ, ನವಬಾಗ್ ಹಾಗೂ ಮನಗೂಳಿ ಅಗಸಿ ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸಚಿವ ಎಂ.ಬಿ. ಪಾಟೀಲ ವೀಕ್ಷಣೆ ನಡೆಸಿದರು. ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಗೆ ಗುಣಮಟ್ಟ ಹಾಗೂ ವೇಗಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.

ಇನ್ನೂ ಸಚಿವರ ಸಿಟಿ ರೌಂಡ್ಸ್ ಗೆ ಜಿಲ್ಲಾಧಿಕಾರಿ,ಮಹಾನಗರ ಪಾಲಿಕೆ ಆಯುಕ್ತರು,ಸಿಬ್ಬಂದಿ, ಪಾಲಿಕೆ ಮೇಯರ್, ಮಾಜಿ ಉಪಮೇಯರ್ ಹಾಗೂ ಸದಸ್ಯರು ಸಾಥ್ ನೀಡಿದರು. ಈಗಾಗಲೇ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಗತ್ಯವಿದ್ದರೆ ಮತ್ತಷ್ಟು ಅನುದಾನ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಬಬಲೇಶ್ವರ ಕ್ಷೇತ್ರದ ಅನುದಾನ ಹೊಂದಾಣಿಕೆ ಮಾಡುವುದಲ್ಲದೆ, ಸಿಎಸ್‌ಆರ್ ನಿಧಿಯನ್ನೂ ಬಳಸುವುದಾಗಿ ತಿಳಿಸಿದರು.

ವಿಜಯಪುರ ನಗರದಲ್ಲಿ ಮಳೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಕೋಟೆಗೋಡೆ ಕಂದಕಗಳ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಮಳೆ ನೀರು ಸರಾಗವಾಗಿ ಹರಿದು ನಗರದಲ್ಲಿ ಪ್ರವಾಹದ ಸಮಸ್ಯೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ

Tags:

error: Content is protected !!