ತಾಲೂಕಿನ ಕಾಡಾಪೂರ ಗ್ರಾಮದಲ್ಲಿ ಶಾಸಕ ಗಣೇಶ ಹುಕ್ಕೇರಿ ಹಾಗೂ ಎಂಎಲ್ಸಿ ಪ್ರಕಾಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಬರೋಬ್ಬರಿ 1.36 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಜರುಗಿತು.


ಗ್ರಾಮದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬಸವೇಶ್ವರ ವಿವಿಧೋದ್ದೇಶ ಪ್ರಾಥಮಿಕ ಸಂಘದ ಕಚೇರಿ ಉದ್ಘಾಟನೆ, 36 ಲಕ್ಷ ರೂಪಾಯಿ ವೆಚ್ಚದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (PKPS) ಗೋದಾಮು ಹಾಗೂ ಕಚೇರಿ ಕಟ್ಟಡವನ್ನು ಶಾಸಕ ಗಣೇಶ ಹುಕ್ಕೇರಿ ಅವರು ಉದ್ಘಾಟಿಸಿದರು. ಇದೇ ವೇಳೆ ಗ್ರಾಮದಲ್ಲಿ 80 ಲಕ್ಷ ರೂಪಾಯಿ ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ ಅವರು ನಾವು ಯಾವತ್ತೂ ರಾಜಕೀಯ ಮಾಡಿಲ್ಲ, ಅಭಿವೃದ್ಧಿಯೇ ನಮ್ಮ ಮುಖ್ಯ ಧೇಯ. ಸದ್ಯ ಕಾಡಾಪೂರ ಗ್ರಾಮವು ರಸ್ತೆ, ಕುಡಿಯುವ ನೀರು, ಚರಂಡಿ, ಸಮುದಾಯ ಭವನ ಹಾಗೂ ಪಿಕೆಪಿಎಸ್ ಕಟ್ಟಡ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದು ಸಾಕಷ್ಟು ಸುಧಾರಣೆ ಕಂಡಿದೆ. ಕಳೆದ 3 ವರ್ಷಗಳಲ್ಲಿ ಕಾಡಾಪೂರ ಗ್ರಾಮಕ್ಕೆ 10 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು,ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 5-6 ಕೋಟಿ ರೂಪಾಯಿ ಒದಗಿಸಲಾಗುವುದು ಎಂದರು.

ರೈತರಿಗೆ ಅನುಕೂಲವಾಗುವಂತೆ ಡಿಸಿಸಿ ಬ್ಯಾಂಕ್ ವತಿಯಿಂದ ಪಿಕೆಪಿಎಸ್ ಬ್ಯಾಂಕುಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆಯಾದರೆ, ಚಿಕ್ಕೋಡಿಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸ್ಥಳಿಯ ಮುಖಂಡರು ಮಾತನಾಡಿ ಗಣೇಶ ಹುಕ್ಕೇರಿ ಹಾಗೂ ಪ್ರಕಾಶ ಹುಕ್ಕೇರಿ ಅವರು ಕಳೆದ 3 ವರ್ಷಗಳಲ್ಲಿ ನಮ್ಮ ಗ್ರಾಮಕ್ಕೆ 10 ಕೋಟಿ ರೂ.ಗೂ ಅಧಿಕ ಅನುದಾನ ನೀಡುವ ಮೂಲಕ ಗ್ರಾಮದ ಚಿತ್ರಣವನ್ನೇ ಬದಲಿಸಿದ್ದಾರೆ. ಇಂತಹ ಅಪರೂಪದ ಜನಪ್ರತಿನಿಧಿಗಳನ್ನು ಪಡೆದಿರುವುದು ನಮ್ಮ ಪುಣ್ಯ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾಜಿ ಶಿಂಧೆ, ಮಹಾಂತೇಶ ಪಾಟೀಲ, ಭರತ ಕೋಳೆಕರ, ಸಂಭಾಜಿ ಪವಾರ, ಅಪ್ಪು ಸನದಿ, ಪ್ರಕಾಶ ರಾಚನ್ನವರ, ಅಪ್ಪಾ ಕೊಳೆಕರ, ಅಜೀತ ತುಬಕೆ, ತಮ್ಮಾಣ್ಣಿ, ತೋಟಕರ, ಅಂಕುಶ ಪವಾರ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಪಿಕೆಪಿಎಸ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
