ಖಾನಾಪುರ ತಾಲೂಕಿನ ಹಳೆಯ ಬ್ರಿಜ್ ಬಳಿ ಬೈಕ್ಗೆ ನಾಯಿ ಅಡ್ಡ ಬಂದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ಮಾರ್ಗವಾಗಿ ಸಾಗುತ್ತಿದ್ದ ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ತಕ್ಷಣವೇ ಗಾಯಾಳುಗಳ ನೆರವಿಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸುವ ಮೂಲಕ ದೇವದೂತನಂತೆ ಮಾನವೀಯತೆ ಮೆರೆದಿದ್ದಾರೆ.



ಬೆಳಗಾವಿಯ ಉದ್ಯಮಬಾಗದಲ್ಲಿ ನೈಟ್ ಡ್ಯೂಟಿ ಮುಗಿಸಿ ಖಾನಾಪುರ ತಾಲೂಕಿನ ಕಾರಲಗಾ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಮರಳುತ್ತಿದ್ದ ಕಾಶಿನಾಥ್ ರಾವಳು ಹಾಗೂ ಗೋರೆ ಎಂಬ ಇಬ್ಬರು ಯುವಕರು ಹಳೆಯ ಬ್ರಿಜ್ ಬಳಿ ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿ ಬಿದ್ದು ರಸ್ತೆಯಲ್ಲೇ ಗಾಯಗೊಂಡು ಪರದಾಡುತ್ತಿದ್ದರು. ಇದೇ ವೇಳೆ ಆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ಯುವಕರ ಸ್ಥಿತಿಯನ್ನು ಕಂಡು ತಕ್ಷಣವೇ ವಾಹನ ನಿಲ್ಲಿಸಿ, ಅವರಿಗೆ ಪ್ರಥಮ ಉಪಚಾರ ನೀಡಿ ತಮ್ಮದೇ ವಾಹನದಲ್ಲಿ ಖಾನಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದರು. ಸಮಯ ಯಾವುದೇ ಇರಲಿ, ಕ್ಷೇತ್ರದಲ್ಲಿ ಅಪಘಾತ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಜನರ ಜೀವ ಉಳಿಸುವ ಅಪದ್ಬಾಂಧವನಾಗಿ ಗುರುತಿಸಿಕೊಂಡಿರುವ ಅರವಿಂದ್ ಪಾಟೀಲ್ ಅವರ ಈ ಶ್ಲಾಘನೀಯ ಸೇವಾ ಮನೋಭಾವಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
– ಅಲ್ತಾಫ್ ಎಂ ಬಸರೀಕಟ್ಟಿ, ಇನ್ ನ್ಯೂಸ್ ಖಾನಾಪುರ
