ಖಾನಾಪುರ ತಾಲೂಕಿನ ದಟ್ಟ ಅರಣ್ಯ ಪ್ರದೇಶದ ದೇಗಾಂವ್ ಗ್ರಾಮದಲ್ಲಿ ಹಗಲು ಹೊತ್ತಿನಲ್ಲೇ ಆನೆಗಳು ನುಗ್ಗಿ ರೈತರ ತೋಟ, ಗದ್ದೆಗಳನ್ನು ಧ್ವಂಸಗೊಳಿಸಿವೆ. ಸಾಮಾಜಿಕ ಕಾರ್ಯಕರ್ತ ಆನಂದ ಗಾವಡೆ ಸೇರಿದಂತೆ ಹಲವು ರೈತರ ತೆಂಗು, ಅಡಿಕೆ, ಬಾಳೆ ಹಾಗೂ ಭತ್ತದ ಬೆಳೆಯನ್ನು ಆನೆಗಳು ಸಂಪೂರ್ಣವಾಗಿ ನಾಶಪಡಿಸಿವೆ.

ಖಾನಾಪುರ ತಾಲೂಕಿನ ದಟ್ಟ ಅರಣ್ಯ ವ್ಯಾಪ್ತಿಯ ದೇಗಾಂವ್ ಗ್ರಾಮದಲ್ಲಿ ಹಗಲು ಹೊತ್ತಿನಲ್ಲೇ ನುಗ್ಗಿದ ಆನೆಗಳ ಹಿಂಡು ರೈತರ ತೋಟಗಳ ಮೇಲೆ ದಾಳಿ ನಡೆಸಿ ಭಾರಿ ಹಾನಿ ಉಂಟುಮಾಡಿದೆ. ಗ್ರಾಮದ ಸಾಮಾಜಿಕ ಕಾರ್ಯಕರ್ತ ಆನಂದ ಗಾವಡೆ ಅವರಿಗೆ ಸೇರಿದ ತೋಟಕ್ಕೆ ನುಗ್ಗಿದ ಆನೆಗಳು ತೆಂಗು, ಬಾಳೆ, ಅಡಿಕೆ ಮರಗಳನ್ನು ಉರುಳಿಸಿರುವುದಲ್ಲದೆ, ಗದ್ದೆಗಳಲ್ಲಿದ್ದ ಭತ್ತದ ಬೆಳೆಯನ್ನು ತುಳಿದು ನಾಶಪಡಿಸಿವೆ. ಇದರಿಂದ ಆನಂದ ಗಾವಡೆ ಅವರಿಗೆ ಅಂದಾಜು 50 ಸಾವಿರ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಈ ಕುರಿತು ತಕ್ಷಣವೇ ರೈತ ಪ್ರಕಾಶ್ ಧೋಂಡ್ಯಾ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಅಧಿಕಾರಿಗಳು ಬೇಜವಾಬ್ದಾರಿಯ ಉತ್ತರ ನೀಡಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಗಾಂವ್ ಸೇರಿದಂತೆ ಸುತ್ತಮುತ್ತಲಿನ ಐದು ಹಳ್ಳಿಗಳಲ್ಲಿ ಆನೆಗಳ ಕಾಟ ವಿಪರೀತವಾಗಿದ್ದು, ಸಾರ್ವಜನಿಕರು ತಾಲೂಕು ಕೇಂದ್ರಕ್ಕೆ ಬರಲೂ ಹೆದರುವಂತಾಗಿದೆ. ಖಾನಾಪುರ ಎಸಿಎಫ್ ಬಸವರಾಜ ವಾಳದ ಹಾಗೂ ಆರ್ಎೋಫ್ಒ ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಆನೆಗಳ ಹಾವಳಿಗೆ ಶಾಶ್ವತ ಬಂದೋಬಸ್ತ್ ಮಾಡಬೇಕು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆನಂದ ಗಾವಡೆ ಎಚ್ಚರಿಸಿದ್ದಾರೆ.
