ಸಿಲಿಕಾನ್ ಸಿಟಿ ಬೆಂಗಳೂರನ್ನು ಮತ್ತೆ ಹಸಿರು ನಗರಿಯನ್ನಾಗಿ ಮಾಡಲು ಸರ್ಕಾರ ಬಿಗ್ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ. ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜಧಾನಿಯ ಜನರಿಗೆ ಹಲವು ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ.


ಇನ್ಮುಂದೆ ಕೆಂಪೇಗೌಡ ಜಯಂತಿಯನ್ನು ಕೇವಲ ವಿಧಾನಸೌಧ ಅಥವಾ ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸದೆ, ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ವರ್ಷಕ್ಕೊಂದು ಕ್ಷೇತ್ರದಂತೆ ಮುಂದಿನ 28 ವರ್ಷಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದರು. ಮಾಗಡಿ ಬಳಿ ಸುಮಾರು 10 ಎಕರೆ ಪ್ರದೇಶದಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ 5.5 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಬಗ್ಗೆ ಮಾತನಾಡಿದ ಸಿಎಂ, ಇನ್ನುಳಿದ ಎರಡು ವರ್ಷಗಳಲ್ಲಿ ಸುಮಾರು 500 ಕಿಲೋಮೀಟರ್ ಮೆಟ್ರೋ ಮಾರ್ಗಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಕೆಂಪೇಗೌಡರ ಜಯಂತಿಯ ಅಂಗವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಡೀ ವಿಶ್ವವೇ ಇಂದು ಬೆಂಗಳೂರಿನತ್ತ ಮುಖ ಮಾಡಿದೆ.

ಕೆಂಪೇಗೌಡರು ವಿಶ್ವಮಾನವ ತತ್ವದಡಿ ಎಲ್ಲರನ್ನೂ ಒಳಗೊಂಡು ಈ ನಗರವನ್ನು ಕಟ್ಟಿದ್ದಾರೆ. ಬೆಂಗಳೂರನ್ನು ಉಳಿಸಿ, ಬೆಳೆಸಿ ಮತ್ತು ಅದರ ಹಸಿರನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ರಾಜಧಾನಿಯನ್ನು ಮತ್ತೆ ‘ಗಾರ್ಡನ್ ಸಿಟಿ’ (ಉದ್ಯಾನ ನಗರಿ) ಯನ್ನಾಗಿ ಪರಿವರ್ತಿಸಲು ಈಗಾಗಲೇ ನಗರದಲ್ಲಿ 15 ಲಕ್ಷ ಸಸಿಗಳನ್ನು ನೆಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಅಲ್ಲದೆ, ಬೆಂಗಳೂರು ಸುತ್ತಮುತ್ತಲಿರುವ ಅರಣ್ಯ ಇಲಾಖೆಗೆ ಸೇರಿದ ಜಾಗಗಳನ್ನು ಗುರುತಿಸಿ, ಅವುಗಳನ್ನು ಕಬ್ಬನ್ ಪಾರ್ಕ್ ಮಾದರಿಯಲ್ಲಿ ಸುಂದರ ಉದ್ಯಾನವನಗಳಾಗಿ (ಪಾರ್ಕ್) ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಈಗಾಗಲೇ ಅಗತ್ಯ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

ನಾಡಪ್ರಭುಗಳ 517ನೇ ಜಯಂತಿಯ ಪ್ರಯುಕ್ತ ವಿಧಾನಸೌಧದ ಎದುರಿರುವ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿದ್ದು, ಈ ವೇಳೆ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ರಿಝ್ವಾನ್ ಅರ್ಷದ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
