State

ತುಂಗಭದ್ರಾ ಜಲಾಶಯಕ್ಕೆ ಹೊಸ ಕಳೆ | ನೂತನ ಕ್ರಸ್ಟ್‌ ಗೇಟ್‌ಗಳ ಲೋಕಾರ್ಪಣೆ | ಮೂರು ರಾಜ್ಯಗಳ ಸಿಎಂ ಭಾಗಿ | ರೈತರ ಜೀವನಾಡಿಯ ಯಶಸ್ವಿ ಪುನಶ್ಚೇತನ

Share

ದಕ್ಷಿಣ ಭಾರತದ ಕೋಟ್ಯಂತರ ರೈತರ ಜೀವನಾಡಿಯಾಗಿರುವ ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದಲ್ಲಿ ಇಂದು ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ಜಲಾಶಯದ ನವೀಕರಣಗೊಂಡ ನೂತನ ಕ್ರಸ್ಟ್ ಗೇಟ್‌ಗಳನ್ನು ಗಣ್ಯರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದ್ದು, ಡ್ಯಾಂ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ತುಂಗಭದ್ರಾ ಜಲಾಶಯದ ನೂತನ 33 ಕ್ರಸ್ಟ್‌ ಗೇಟ್‌ಗಳ ಸ್ಟೀಲ್ ವೇ ಅನ್ನು ಇಂದು ರಿಮೋಟ್ ಒತ್ತುವ ಮೂಲಕ ಯಶಸ್ವಿಯಾಗಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಸಿಎಂ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣದ ಸಿಎಂ ಎ. ರೇವಂತ್ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಒಟ್ಟಾಗಿ ಪಾಲ್ಗೊಂಡು, ಜಲಾಶಯದ 18, 19, 20 ಮತ್ತು 21ನೇ ಗೇಟ್‌ಗಳನ್ನು ಏಕಕಾಲಕ್ಕೆ ಓಪನ್ ಮಾಡುವ ಮೂಲಕ ಚಾಲನೆ ನೀಡಿದರು. ಗೇಟ್ ಲೋಕಾರ್ಪಣೆಗೆ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಆರಾಧ್ಯ ದೈವ ಶ್ರೀ ಗಂಗಾಧರ ಅಜ್ಜಯ್ಯ ಸ್ವಾಮಿಯವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು. ಜಲಾಶಯದ ಗೇಟ್ ದುರಸ್ತಿ ಕಾರ್ಯವು ಯಾವುದೇ ವಿಘ್ನವಿಲ್ಲದೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಗಿದ್ದು, ಕೊಪ್ಪಳದ ಮುನಿರಾಬಾದ್‌ನ ಬೃಹತ್ ಸಮಾವೇಶದ ಮುಖ್ಯ ವೇದಿಕೆಯಲ್ಲೂ ಸ್ವಾಮೀಜಿಯವರ ಫೋಟೋವನ್ನು ಪ್ರತಿಷ್ಠಾಪಿಸಲಾಗಿತ್ತು. ವಿವಿಐಪಿಗಳ ಭೇಟಿಯ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಡಳಿತ ಹಾಗೂ ಟಿ.ಬಿ.ಡ್ಯಾಂ ಆಡಳಿತ ಮಂಡಳಿ ಹೆಜ್ಜೆ ಹೆಜ್ಜೆಗೂ ಬಿಗಿ ಪೊಲೀಸ್ ಸರ್ಪಗಾವಲು ನಿಯೋಜಿಸಿದ್ದು, ಕಟ್ಟುನಿಟ್ಟಿನ ಪಾಸ್ ಪರಿಶೀಲನೆಯ ನಂತರವೇ ಪ್ರವೇಶ ಕಲ್ಪಿಸಲಾಗಿತ್ತು. ಗಣ್ಯರೆಲ್ಲರೂ ಬ್ಯಾಟರಿ ಚಾಲಿತ ವಾಹನದ ಮೂಲಕ ಗೇಟ್‌ಗಳ ಬಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಇಡೀ ಜಲಾಶಯದ ಆವರಣವನ್ನು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳು, ಬಾಳೆದಿಂಡು ಹಾಗೂ ಚಂಡುಹೂವಿನ ತಳಿರು ತೋರಣಗಳಿಂದ ಮದುವಣಗಿತ್ತಿಯಂತೆ ಶೃಂಗರಿಸಲಾಗಿತ್ತು. ಗೇಟ್ ದ್ವಾರದಲ್ಲಿ ಗಣೇಶ್ ಪ್ರತಿಮೆ ಇಟ್ಟು ವಿಶೇಷ ಪೂಜೆ ನೆರವೇರಿಸಲಾಗಿದ್ದು, ಸುಮಾರು ಎರಡು ಕಿಲೋಮೀಟರ್‌ವರೆಗೂ ವಿದ್ಯುತ್ ದೀಪಗಳ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಉದ್ಘಾಟನಾ ಪ್ರಕ್ರಿಯೆಯ ನಂತರ ಎಲ್ಲಾ ಗಣ್ಯರು, ರಾಜ್ಯದ ಸಚಿವರು, ಶಾಸಕರು ಮತ್ತು ಸಂಸದರೊಂದಿಗೆ ಮುನಿರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Tags:

error: Content is protected !!