Chikkodi

ಕಳ್ಳತನ ತಡೆಗೆ ಜಿಲ್ಲಾದ್ಯಂತ ಎಎನ್‌ಪಿಆರ್’ ಕ್ಯಾಮೆರಾ ಅಳವಡಿಕೆ: ಎಸ್ಪಿ ರಾಮರಾಜನ್

Share

ಜಿಲ್ಲಾದ್ಯಂತ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಾಗೂ ಅಪರಾಧ ಕೃತ್ಯಗಳ ಮೇಲೆ ನಿಗಾ ಇಡಲು ಅತ್ಯಾಧುನಿಕ ‘ಎಎನ್‌ಪಿಆರ್’ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದರು.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ‌ಜೊತೆಗೆ ಮಾತನಾಡಿದ ಅವರು, ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಕೈಗೊಂಡಿರುವ ಹಲವು ಮಹತ್ವದ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು.

ಜಿಲ್ಲೆಯ ಪ್ರಮುಖ ರಸ್ತೆ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗುತ್ತಿರುವ ಎಎನ್‌ಪಿಆರ್ ಕ್ಯಾಮೆರಾಗಳು ಸಂಚರಿಸುವ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಸ್ವಯಂಚಾಲಿತವಾಗಿ ಕ್ಯಾಪ್ಚರ್ ಮಾಡಲಿವೆ. ಇದರಿಂದಾಗಿ ಯಾವುದೇ ಅಪರಾಧ ಕೃತ್ಯ ನಡೆಸಿ ಪರಾರಿಯಾಗುವ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ಎಸ್ಪಿ ವಿವರಿಸಿದರು.

ಗಡಿಭಾಗದಲ್ಲಿ ಅಪರಾಧಿಗಳ ಓಡಾಟ ಹೆಚ್ಚಾಗದಂತೆ ತಡೆಯಲು ಪೊಲೀಸ್ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ. ಗಡಿ ಭಾಗದ ಸೂಕ್ಷ್ಮ ಪ್ರದೇಶಗಳಲ್ಲೂ ಸಹ ಶೀಘ್ರದಲ್ಲೇ ಸಿಸಿಟಿವಿ ಹಾಗೂ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಿ, ಕಣ್ಗಾವಲು ಬಿಗಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಸಾರ್ವಜನಿಕರನ್ನು ಪೀಡಿಸುತ್ತಿರುವ ಮೀಟರ್ ಬಡ್ಡಿ ದಂಧೆಯ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ ಎಸ್ಪಿ ರಾಮರಾಜನ್ ಮೀಟರ್ ಬಡ್ಡಿ ದಂಧೆಯಿಂದ ತೊಂದರೆಗೊಳಗಾದ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಮುಂದೆ ಬಂದು ದೂರು ದಾಖಲಿಸಬೇಕು. ದೂರು ಬಂದ ತಕ್ಷಣವೇ ಅಂತಹ ದಂಧೆಕೋರರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಕಡಿಮೆ ಅವಧಿಯಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ಸಾರ್ವಜನಿಕರಿಗೆ ಆಮಿಷ ಒಡ್ಡುವ ಜಾಲಗಳ ಬಗ್ಗೆ ಪೊಲೀಸ್ ಇಲಾಖೆ ತೀವ್ರ ನಿಗಾ ಇಟ್ಟಿದೆ. ಇಂತಹ ವಂಚಕರ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ತಕ್ಷಣವೇ ಸೂಕ್ತ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಚಿಕ್ಕೋಡಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕುರಿತು ಇಲಾಖೆಯು ಸೂಕ್ತ ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ರಾಮರಾಜನ್ ಹೇಳಿದರು.

 

Tags:

error: Content is protected !!