ಮೊಹರಂ ಹಬ್ಬದ ಅಂಗವಾಗಿ ಬ್ಯಾಂಜೋಗೆ ಕುಣಿಯುವ ವೇಳೆ ನಡೆದ ಕ್ಷುಲ್ಲಕ ಗಲಾಟೆ ಕೊಲೆಗೆ ಯತ್ನದ ಮಟ್ಟಕ್ಕೆ ತಿರುಗಿದ ಘಟನೆ ವಿಜಯಪುರ ನಗರದ ಅಬ್ದುಲ್ ರಜಾಕ್ ದರ್ಗಾ ಸಮೀಪ ಶುಕ್ರವಾರ ರಾತ್ರಿ ನಡೆದಿದೆ. ಲಾಲಸಾಬ್ ನಂದ್ಯಾಳ (40) ಹಾಗೂ ಅವರ ಪುತ್ರ ಅಬ್ದುಲ್ಲಾ ನಂದ್ಯಾಳ (17) ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಚಾಕುವಿನಿಂದ ಕೈ ಹಾಗೂ ಬೆನ್ನಿಗೆ ಚುಚ್ಚಿ, ಬೇಸ್ಬಾಲ್ ಬ್ಯಾಟ್ಸ್ಟಿಕ್ನಿಂದ ಮೂಗು ಹಾಗೂ ಕಾಲಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ತಂದೆ-ಮಗನನ್ನು ಸ್ಥಳೀಯರು ತಕ್ಷಣ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಾಂಧಿಚೌಕ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲ್ಲೆ ನಡೆಸಿದ ನಾಲ್ವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
