Chikkodi

ಅಂಗಡಿ ಒಡೆದು 7 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನ,ಸಿಸಿಟಿವಿಯಲ್ಲಿ ಕಳ್ಳರ ದೃಶ್ಯ ಸೆರೆ

Share

ನಿಪ್ಪಾಣಿಯ ಇದ್ಗಾ ಮೈದಾನ ಪ್ರದೇಶದ ಪಂತ್ ಮಂದಿರದ ಪಕ್ಕದಲ್ಲಿರುವ ‘ಪೂಜಾ ಎಲೆಕ್ಟ್ರಿಕಲ್ ಮೋಟಾರ್ ಸೇಲ್ಸ್ ಆ್ಯಂಡ್ ಸರ್ವಿಸ್’ ಅಂಗಡಿಯ ಬೀಗ ಒಡೆದು ಕಳ್ಳರು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ನಡೆದಿದೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಯರನಾಳ ಗ್ರಾಮದ ನಿವಾಸಿಯಾದ ಮಹಾವೀರ ಪತ್ರಾವಳೆ ಎಂಬುವರು ಪಂತ್ ಮಂದಿರದ ಬಳಿ ಈ ಅಂಗಡಿಯನ್ನು ಹೊಂದಿದ್ದಾರೆ. ಮಹಾವೀರ ಅವರು ಜನರೇಟರ್ ರಿಪೇರಿ, ವೈರಿಂಗ್, ಮೋಟಾರ್ ಹಾಗೂ ಪಂಪ್ ರಿಪೇರಿ ಮತ್ತು ಮಾರಾಟದ ಕೆಲಸವನ್ನು ಮಾಡುತ್ತಾರೆ.

ರಾತ್ರಿ ಮಹಾವೀರ ಅವರು ಎಂದಿನಂತೆ ಕೆಲಸ ಮುಗಿಸಿ ಅಂಗಡಿಯನ್ನು ಬಂದ್ ಮಾಡಿ ಮನೆಗೆ ಹೋಗಿದ್ದರು.ಮುಂಜಾನೆ ಕಳ್ಳರು ಅಂಗಡಿಯ ಹಿಂಭಾಗದ ಕಿಟಕಿಯ ಗಾಜನ್ನು ಒಡೆದು, ಕಬ್ಬಿಣದ ಸರಳುಗಳನ್ನು ಬಾಗಿಸಿ ಒಳಗೆ ನುಗ್ಗಿದ್ದಾರೆ.

ಅಂಗಡಿಯಲ್ಲಿದ್ದ ಹೊಸ ಮತ್ತು ಹಳೆಯ ತಾಮ್ರದ ವೈರುಗಳು,ರಿಪೇರಿ ಮಾಡಲಾಗಿದ್ದ ಮೋಟಾರ್‌ಗಳು, ಹೊಸ ಮೋಟಾರ್‌ಗಳು ಹಾಗೂ ಇತರ ಪರಿಕರಗಳು ಸೇರಿದಂತೆ ಒಟ್ಟು 7 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ. ಬೆಳಗ್ಗೆ ಮಹಾವೀರ ಅವರು ಅಂಗಡಿಗೆ ಬಂದಾಗ ಈ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ನಾಲ್ಕು ಚಕ್ರದ ವಾಹನದಲ್ಲಿ ಬಂದಿದ್ದ ಕಳ್ಳರು ಈ ಕೃತ್ಯ ಎಸಗಿದ್ದು, ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಘಟನೆಗೆ ಸಂಬಂಧಿಸಿದಂತೆ ಮಹಾವೀರ ಪತ್ರಾವಳೆ ಅವರು ನಿಪ್ಪಾಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಡಿ.ಕೆ‌.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!