baglkote

ಬಾಗಲಕೋಟೆಯಲ್ಲಿ ಜೆ.ಕೆ. ಸಿಮೆಂಟ್ ಫ್ಯಾಕ್ಟರಿ ವಿರುದ್ಧ ರೈತರ ಆಕ್ರೋಶ: ಮುದ್ದಾಪುರದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

Share

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಸಿಮೆಂಟ್ ಕಾರ್ಖಾನೆಯೊಂದರ ಮಾಲಿನ್ಯದ ವಿರುದ್ಧ ರೈತರು ರೊಚ್ಚಿಗೆದ್ದಿದ್ದಾರೆ. ಮುದ್ದಾಪುರದಲ್ಲಿರುವ ಪ್ರಸಿದ್ಧ ಜೆ.ಕೆ. ಸಿಮೆಂಟ್ ಕಾರ್ಖಾನೆಯಿಂದ ಹೊರಬರುತ್ತಿರುವ ದಟ್ಟವಾದ ಕರಿ ಧೂಳಿನಿಂದ ಬೇಸತ್ತಿರುವ ನೂರಾರು ರೈತರು ಹಾಗೂ ಗ್ರಾಮಸ್ಥರು ಕಾರ್ಖಾನೆಯ ಮುಂಭಾಗದಲ್ಲೇ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿರುವ ಜೆ.ಕೆ. ಸಿಮೆಂಟ್ ಕಾರ್ಖಾನೆಯಿಂದ ನಿತ್ಯ ಹೊರಬರುತ್ತಿರುವ ಅಪಾರ ಪ್ರಮಾಣದ ಕರಿ ಧೂಳು ಹಾಗೂ ದಟ್ಟವಾದ ಹೊಗೆಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಪ್ರಮುಖವಾಗಿ ಮುದ್ದಾಪುರ, ನಿಂಗಾಪುರ, ಬೊಮ್ಮಣ ಬುದ್ನಿ, ಮೆಟಗುಡ್ಡ ಹಾಗೂ ಹಲಕಿ ಗ್ರಾಮಗಳ ಜನರಿಗೆ ಈ ಕಾರ್ಖಾನೆಯು ದೊಡ್ಡ ಕಂಟಕವಾಗಿ ಪರಿಣಮಿಸಿದೆ. ರಾತ್ರಿ ವೇಳೆ ಕಾರ್ಖಾನೆಯಿಂದ ಬಿಡಲಾಗುವ ದಟ್ಟವಾದ ಕರಿ ಧೂಳಿನಿಂದಾಗಿ ಸ್ಥಳೀಯರಲ್ಲಿ ಮಾರಣಾಂತಿಕ ಕಾಯಿಲೆಗಳ ಭೀತಿ ಆವರಿಸಿದ್ದು, ಸುತ್ತಮುತ್ತಲಿನ ಜಮೀನುಗಳ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಈ ಕುರಿತು ಈಗಾಗಲೇ ಹತ್ತಾರು ಬಾರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಇದೀಗ ರೊಚ್ಚಿಗೆದ್ದಿರುವ ರೈತರು ಕಾರ್ಖಾನೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈಗಾಗಲೇ ಹತ್ತಾರು ಪರಿಸರ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಗ್ರಾಮಗಳ ಮಧ್ಯೆಯೇ, ಜೆ.ಕೆ. ಸಿಮೆಂಟ್ ಕಾರ್ಖಾನೆಯು ಇದೀಗ ಹೆಚ್ಚುವರಿ ಘಟಕ ಸ್ಥಾಪನೆಗೆ ಮುಂದಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹೆಚ್ಚುವರಿ ಘಟಕ ಸ್ಥಾಪನೆಯಿಂದಾಗಿ ತಾಲೂಕಿನ ಜನರ ಬದುಕು ಇನ್ನಷ್ಟು ದುಸ್ತರವಾಗಲಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಇದರೊಂದಿಗೆ ನೂರಾರು ಅಡಿ ಆಳದ ಸಿಮೆಂಟ್ ಕಲ್ಲಿನ ಕ್ವಾರಿಗಳಲ್ಲಿ ನಡೆಯುತ್ತಿರುವ ಭೀಕರ ಗಣಿಗಾರಿಕೆಯಿಂದಾಗಿ ರೈತರ ಜಮೀನುಗಳು ಹಾನಿಗೊಳಗಾಗುತ್ತಿದ್ದು, ಸುತ್ತಮುತ್ತಲಿನ ಬೋರ್‌ವೆಲ್‌ಗಳ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಹೀಗಾಗಿ ಕಾರ್ಖಾನೆಯ ದೌರ್ಜನ್ಯ ಹಾಗೂ ಮಾಲಿನ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕೆಂದು ಪಟ್ಟು ಹಿಡಿದಿರುವ ರೈತರು, ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Tags:

error: Content is protected !!