Belagavi

ಬೆಳಗಾವಿಯ ಕಲೈಗಾರ್ ಗಲ್ಲಿಯಲ್ಲಿ ಗುತ್ತಿಗೆದಾರನ ಬೇಜವಾಬ್ದಾರಿ: ಕಾಮಗಾರಿ ಅರ್ಧಕ್ಕೆ ಬಿಟ್ಟು ನಾಪತ್ತೆ, ನರಕ ಯಾತನೆಯಲ್ಲಿ ಸಾರ್ವಜನಿಕರು!

Share

ಬೆಳಗಾವಿಯಲ್ಲಿ ಜನರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ನರಕ ಯಾತನೆ ಅನುಭವಿಸುವಂತಾಗಿದೆ. ನಗರದ ಕಲೈಗಾರ್ ಗಲ್ಲಿಯಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಟ್ಟು ಗುತ್ತಿಗೆದಾರ ನಾಪತ್ತೆಯಾಗಿದ್ದು, ಇಡೀ ಗಲ್ಲಿಯ ನಿವಾಸಿಗಳು ಸಮಸ್ಯೆಗಳಲ್ಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿ ನಗರದ ಕಲೈಗಾರ್ ಗಲ್ಲಿಯಲ್ಲಿ ಹಳೆಯದಾದ ಚಿಕ್ಕ ಒಳಚರಂಡಿ ವ್ಯವಸ್ಥೆಯನ್ನು ಬದಲಾಯಿಸಿ, ಬೃಹತ್ ಪೈಪ್ ಅಳವಡಿಸುವ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಕಾಮಗಾರಿಯನ್ನು ಯೋಜನಾಬದ್ಧವಾಗಿ ಮುಗಿಸದ ಗುತ್ತಿಗೆದಾರ, ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾನೆ. ಇದ್ದ ಒಳಚರಂಡಿ ಪೈಪ್‌ಲೈನ್ ಕೂಡ ಈಗ ಸೋರಿಕೆಯಾಗುತ್ತಿದ್ದು, ರಸ್ತೆಯಲ್ಲೆಲ್ಲಾ ಕೊಳಚೆ ನೀರು ಹರಿಯುತ್ತಿದೆ. ಇತ್ತ ಗುತ್ತಿಗೆದಾರನೂ ಇಲ್ಲದೆ, ಅತ್ತ ಅಧಿಕಾರಿಗಳೂ ಇತ್ತ ತಿರುಗಿ ನೋಡದೆ ಇರುವುದರಿಂದ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೈಟ್
ಸುಮಾರು 20 ದಿನಗಳ ಹಿಂದೆ ಅತ್ಯಂತ ಉತ್ಸಾಹದಿಂದ ರಸ್ತೆಯನ್ನು ಅಗೆದು ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕಳೆದ ಒಂದು ವಾರದಿಂದ ಸ್ಥಳಕ್ಕೆ ಯಾವುದೇ ಕೆಲಸಗಾರರು ಬಂದಿಲ್ಲ. ಅಗೆದ ಗುಂಡಿಗಳು ಹಾಗೇ ಇರುವುದರಿಂದ ಇಡೀ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಇನ್ನು ಚರಂಡಿ ನೀರಿನಿಂದಾಗಿ ಇಡೀ ಗಲ್ಲಿಯಲ್ಲಿ ತೀವ್ರ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಪುಟ್ಟ ಮಕ್ಕಳು ಶಾಲೆಗೆ ಹೋಗಲು ಮತ್ತು ಆಟವಾಡಲು ಸಾಧ್ಯವಾಗುತ್ತಿಲ್ಲ. ಮಹಿಳೆಯರು, ವೃದ್ಧರು ಹಾಗೂ ರೋಗಿಗಳು ಮನೆಯಿಂದ ಹೊರಬರಲಾರದಂತ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ಮಾನ್ಸೂನ್ ಮಳೆ ಆರಂಭವಾಗುವ ಮುನ್ಸೂಚನೆ ಇದ್ದು, ಒಂದು ವೇಳೆ ಜೋರು ಮಳೆ ಬಂದರೆ ಈ ಅಗೆದಿರುವ ರಸ್ತೆಗಳು ಕೆಸರು ಗದ್ದೆಯಾಗಿ ಜನರ ಗೋಳು ಮತ್ತಷ್ಟು ಹೆಚ್ಚಾಗಲಿದೆ. ಸಾರ್ವಜನಿಕರ ಇಷ್ಟೆಲ್ಲಾ ಕಷ್ಟಗಳನ್ನು ಕಣ್ಣಾರೆ ಕಾಣುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಗುತ್ತಿಗೆದಾರನಿಗೆ ಚಾಟಿ ಬೀಸಿ, ಜನರ ಹಿತದೃಷ್ಟಿಯಿಂದ ಈ ಕಾಮಗಾರಿಗೆ ವೇಗ ನೀಡಬೇಕೆಂದು ಕಲೈಗಾರ್ ಗಲ್ಲಿಯ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Tags:

error: Content is protected !!