ಸದಾ ಬಿಸಿಲಿನ ಬೇಗೆಯಿಂದ ಕಂಗೆಡುವ ಬಾಗಲಕೋಟೆ ಜಿಲ್ಲೆಯ ಜನತೆಗೆ ಇಲ್ಲೊಂದು ತಂಪಾದ ಮತ್ತು ಅತ್ಯಂತ ಸಂತಸದ ಸುದ್ದಿಯಿದೆ. ಹೌದು, ಮುಳುಗಡೆ ನಗರಿ ಬಾಗಲಕೋಟೆಯ ಪಕ್ಕದಲ್ಲೇ ಜರ್ಮನಿಯ ತಂತ್ರಜ್ಞಾನ ಆಧರಿತ ‘ಮಿಯಾವಾಕಿ’ ಮಾದರಿಯ ದಟ್ಟ ಅರಣ್ಯವೊಂದನ್ನು ಸೃಷ್ಟಿಸಲಾಗಿದೆ.


ಸೇವಾ ಜನನಿ ಹಾಗೂ ಮಿಸ್ಟಿಯಾನ್ ಸಂಸ್ಥೆಯ ಸಮಾಜಮುಖಿ ಚಿಂತನೆಯಿಂದಾಗಿ ಮೂಡಿಬಂದಿರುವ ಈ ಕಾಡಿನೊಳಗೆ ಹೆಜ್ಜೆ ಇಟ್ಟರೆ ಸಾಕು, ಉಷ್ಣಾಂಶ ಬರೋಬ್ಬರಿ 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾದ ಅನುಭವವಾಗುತ್ತದೆ. ಸಾಮಾನ್ಯವಾಗಿ ಉತ್ತರ ಕರ್ನಾಟಕ ಅಂದ ತಕ್ಷಣ ಕಣ್ಣಮುಂದೆ ಬರುವುದು ಸುಡುವ ಬಿಸಿಲು. ಆದರೆ ಬಾಗಲಕೋಟೆಯ ಗದ್ದನಕೇರಿಯ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಈಗ ಹಸಿರಿನ ಕ್ರಾಂತಿಯೇ ನಡೆದಿದೆ. ಬಿಸಿಲಿನ ತಾಪವನ್ನು ತಗ್ಗಿಸುವ ಮತ್ತು ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ಸೇವಾ ಜನನಿ ಸಂಸ್ಥೆ ಹಾಗೂ ಮಿಸ್ಟಿಯಾನ್ ಸಂಸ್ಥೆಯ ಜಂಟಿ ನೇತೃತ್ವದಲ್ಲಿ ಕೇವಲ ಒಂದು ಎಕರೆ ಜಾಗೆಯಲ್ಲಿ ಜರ್ಮನಿಯ ಮಿಯಾವಾಕಿ ಮಾದರಿಯ ದಟ್ಟವಾದ ಕಾಡನ್ನು ನಿರ್ಮಿಸಲಾಗಿದೆ. ಅತ್ಯಂತ ಕಡಿಮೆ ಜಾಗದಲ್ಲಿ, ಅತಿ ವೇಗವಾಗಿ ಬೆಳೆಯುವ ಗಿಡಗಳನ್ನು ನೆಟ್ಟು ಬೆಳೆಸಲಾಗಿರುವ ಈ ವನವೀಕ್ಷಣೆಗಾಗಿಯೇ ಈಗ ಜನ ಆಗಮಿಸುತ್ತಿದ್ದಾರೆ. ವಿಶೇಷವೆಂದರೆ ಈ ಅರಣ್ಯ ಪ್ರದೇಶದೊಳಗೆ ಪ್ರವೇಶಿಸುತ್ತಿದ್ದಂತೆಯೇ ಹಕ್ಕಿಗಳ ಚಿಲಿಪಿಲಿ ನಾದ ಮನಸ್ಸಿಗೆ ಮುದ ನೀಡುತ್ತದೆ. ಕೇವಲ ಒಂದು ಎಕರೆ ವಿಸ್ತೀರ್ಣದಲ್ಲಿ ಬರೋಬ್ಬರಿ 60ಕ್ಕೂ ಹೆಚ್ಚು ಪ್ರಬೇಧಗಳ ವಿವಿಧ ಹಣ್ಣಿನ ಗಿಡಗಳನ್ನು ಇಲ್ಲಿ ಬೆಳೆಸಲಾಗಿದೆ. ಈ ದಟ್ಟ ಕಾಡಿನ ಕಾರಣದಿಂದಾಗಿ ಸುತ್ತಮುತ್ತಲಿನ ಪ್ರದೇಶಕ್ಕಿಂತ ಇಲ್ಲಿನ ತಾಪಮಾನ 2 ಡಿಗ್ರಿ ನಷ್ಟು ಕಡಿಮೆ ಇರಲಿದ್ದು, ಮುಳುಗಡೆ ನಗರಿಗೆ ಇದೊಂದು ನೈಸರ್ಗಿಕ ವರದಾನವಾಗಿ ಪರಿಣಮಿಸಿದೆ.

ಸಂಸ್ಥೆಯ ಈ ಸಮಾಜಮುಖಿ ಕಾರ್ಯಕ್ಕೆ ಜಿಲ್ಲೆಯ ಜನತೆ ಹಾಗೂ ಪರಿಸರ ಪ್ರೇಮಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ಇನ್ ನ್ಯೂಸ್, ಬಾಗಲಕೋಟೆ.
