ಹಿಂದೂ ಮತ್ತು ಮುಸ್ಲಿಂ ಬಾಂಧವರು ಅತ್ಯಂತ ಸೌಹಾರ್ದತೆಯಿಂದ, ಒಟ್ಟಾಗಿ ಆಚರಿಸುವ ಪವಿತ್ರ ಮೊಹರಂ ಹಬ್ಬದ ಅಂಗವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಭಾವೈಕ್ಯತೆಯ ಧನ್ಯ ಕ್ಷಣವೊಂದು ಸಾಕ್ಷಿಯಾಗಿದೆ. ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆಗೆ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಅಲಾಯಿ ದೇವರು ಭೇಟಿ ನೀಡಿದ್ದು, ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ದೇವರಿಗೆ ಭಕ್ತಿಭಾವದಿಂದ ವಿಶೇಷ ಪೂಜೆ ಸಲ್ಲಿಸಿ ಸೌಹಾರ್ದತೆ ಮೆರೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಕೋಮು ಸೌಹಾರ್ದತೆಯ ಅಪೂರ್ವ ದೃಶ್ಯ ಕಂಡುಬಂದಿದೆ. ಹಿಂದೂ ಹಾಗೂ ಮುಸ್ಲಿಂ ಧರ್ಮದವರು ಒಟ್ಟಾಗಿ ಸೇರಿ ಸಡಗರದಿಂದ ಆಚರಿಸುವ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ, ಕೆರೂರ ಪಟ್ಟಣದ ಅಲಾಯಿ ದೇವರನ್ನು ಕೆರೂರ ಪೊಲೀಸ್ ಠಾಣೆಯ ಆವರಣಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಅತ್ಯಂತ ಶ್ರದ್ಧಾಭಕ್ತಿಯಿಂದ ಅಲಾಯಿ ದೇವರಿಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಜಾತಿ-ಮತದ ಭೇದ ಮರೆತು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಯ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದು, ಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಹರಂ ಹಬ್ಬದ ಭಾವೈಕ್ಯತೆಯ ವಾತಾವರಣ ಮನೆಮಾಡಿದೆ.
