Belagavi

ಬೆಳಗಾವಿ: ಘುಮಟಮಾಳ ಮಾರುತಿ ಮಂದಿರ ಹಾಗೂ ಬಾಂಡಗಿ ಟ್ರಸ್ಟ್‌ನಿಂದ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿನಿಯರಿಗೆ ಸತ್ಕಾರ!

Share

ಬೆಳಗಾವಿ ತಾಲೂಕಿನ ಮರಾಠಿ ಮಾಧ್ಯಮ ಪ್ರೌಢಶಾಲೆಗಳಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸಾಧಕ ವಿದ್ಯಾರ್ಥಿನಿಯರನ್ನು ಶ್ರೀ ಘುಮಟಮಾಳ ಮಾರುತಿ ಮಂದಿರ ಪಬ್ಲಿಕ್ ಟ್ರಸ್ಟ್ ಮತ್ತು ದಿವಂಗತ ಬಿ. ಕೆ. ಬಾಂಡಗಿ ಶೈಕ್ಷಣಿಕ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ಸತ್ಕರಿಸಲಾಯಿತು.

ಬೆಳಗಾವಿಯ ಶ್ರೀ ಘುಮಟಮಾಳ ಮಾರುತಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಕುಲದೀಪ್ ಭೇಕಣೆ ವಹಿಸಿದ್ದರು. ವೇದಿಕೆಯಲ್ಲಿ ಬಾಂಡಗಿ ಟ್ರಸ್ಟ್‌ನ ರಘುನಾಥ್ ಬಾಂಡಗಿ, ಮಂದಿರದ ಉಪಾಧ್ಯಕ್ಷ ಪ್ರಕಾಶ್ ಮಾಹೇಶ್ವರಿ ಹಾಗೂ ಕಾರ್ಯದರ್ಶಿ ಅನಂತ್ ಲಾಡ್ ಉಪಸ್ಥಿತರಿದ್ದರು. ಬೆಳಗಾವಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ತಲಾ 1,500 ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ, ಪುಸ್ತಕ ಹಾಗೂ ಗುಲಾಬಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಸೌ ಮನಸ್ವಿ ಕೇದಾರ್ ಬಾಂಡಗಿ ಅವರು ಎಲ್ಲರನ್ನೂ ಸ್ವಾಗತಿಸಿದರು. ನಂತರ ರಘುನಾಥ್ ಬಾಂಡಗಿ ಅವರು ಹನುಮಂತನ ಭಾವಚಿತ್ರಕ್ಕೆ ಹಾಗೂ ಅತಿಥಿ ಪ್ರಕಾಶ್ ಕಡೋಲ್ಕರ್ ಅವರು ದಿವಂಗತ ಬಿ. ಕೆ. ಬಾಂಡಗಿ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿ ದೀಪ ಪ್ರಜ್ವಲನೆ ಮಾಡಿದರು. ಇದೇ ವೇಳೆ ಕಾಕಡೆ ಫೌಂಡೇಶನ್‌ನ ಕಿಶೋರ್ ಕಾಕಡೆ ವಿದ್ಯಾರ್ಥಿಗಳಿಗೆ ಮೌಲ್ಯಯುತ ಮಾರ್ಗದರ್ಶನ ನೀಡಿದರು. ಮುಖ್ಯ ಭಾಷಣಕಾರರಾದ ಪ್ರೊ. ಸ್ವರೂಪಾ ಇನಾಮದಾರ್ ಮಾತನಾಡಿ, ಪರಾಕ್ರಮಿ ಹಾಗೂ ಸಂಸ್ಕೃತ ವಿದ್ವಾಂಸನಾಗಿದ್ದ ಮಾರುತಿಯಿಂದ ಪ್ರೇರಣೆ ಪಡೆದು, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ನಮ್ರತೆಯೊಂದಿಗೆ ಜೀವನವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ಕರೆ ನೀಡಿದರು.

ಅನಂತ್ ಲಾಡ್ ಅತಿಥಿ ಪರಿಚಯದೊಂದಿಗೆ ಕಾರ್ಯಕ್ರಮ ನಿರೂಪಿಸಿದರೆ, ನೇತಾಜಿ ಜಾಧವ್ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಬಾಬುರಾವ್ ಪಾಟೀಲ್, ಚಂದ್ರಕಾಂತ್ ಬಾಂಡಗಿ, ಸಂಭಾಜಿ ಚವ್ಹಾಣ್, ಸುನೀಲ್ ಸರ್ನೋಬತ್ ಸೇರಿದಂತೆ ರಮೇಶ್ ಕುಕಡೋಳ್ಕರ್, ಪ್ರಭಾಕರ್ ಪಾಟೀಲ್, ಮನೋಹರ್ ಕುಕಡೋಳ್ಕರ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!