ಯಕ್ಸಂಬಾ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಪ್ರಸಿದ್ಧ ಹೋಟೆಲ್ವೊಂದರಲ್ಲಿ ಆಕಸ್ಮಿಕವಾಗಿ ಫ್ರಿಡ್ಜ್ ಸ್ಫೋಟಗೊಂಡು ಭೀಕರ ಬೆಂಕಿ ಅವಘಡ ಸಂಭವಿಸಿದೆ.

ಮಲ್ದಾರಿ ಮಾರುತಿ ಶಾರಬಿದ್ರೆ ಅವರ ಮಾಲಿಕತ್ವದ ಶ್ರೀ ಕೃಷ್ಣ ಭವನ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಹೋಟೆಲ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಎಂದಿನಂತೆ ಹೋಟೆಲ್ನಲ್ಲಿ ವ್ಯಾಪಾರ ವ್ಯವಹಾರಗಳು ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಫ್ರಿಡ್ಜ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕ್ಷಣಾರ್ಧದಲ್ಲಿ ಹೋಟೆಲ್ನಾದ್ಯಂತ ಬೆಂಕಿ ವ್ಯಾಪಿಸಿದೆ.
ಈ ದುರಂತದಲ್ಲಿ ಹೋಟೆಲ್ನಲ್ಲಿದ್ದ ಫ್ರಿಡ್ಜ್ ಮತ್ತು ಟಿವಿ, ಹೋಟೆಲ್ ಸಾಮಗ್ರಿಗಳಾದ ತಂಪು ಪಾನೀಯಗಳ ಸ್ಟಾಕ್, ಸೌಂಡ್ ಬಾಕ್ಸ್ ಮತ್ತು ವಿದ್ಯುತ್ ವೈರಿಂಗ್ ಸುಟ್ಟುಕರಕಲಾಗಿವೆ. ಏಕಾಏಕಿ ಕೇಳಿದ ಭೀಕರ ಸ್ಫೋಟದ ಶಬ್ದ ಹಾಗೂ ಹೋಟೆಲ್ನಿಂದ ದಟ್ಟವಾಗಿ ಹೊರಬರುತ್ತಿದ್ದ ಹೊಗೆಯನ್ನು ಕಂಡು ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಗಾಬರಿಗೊಂಡು ಓಡಾಡಿದರು.
ಅವಘಡ ಸಂಭವಿಸುತ್ತಿದ್ದಂತೆ ಸ್ಥಳೀಯ ನಾಗರಿಕರು ಹಾಗೂ ಸುತ್ತಮುತ್ತಲಿನ ವ್ಯಾಪಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಮಯಪ್ರಜ್ಞೆ ಮೆರೆದ ಸಾರ್ವಜನಿಕರು ನೀರು ಮತ್ತು ಲಭ್ಯವಿದ್ದ ಸಾಧನಗಳನ್ನು ಬಳಸಿ ಹರಸಾಹಸಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿದಂತಾಗಿದೆ.
